ಈ ಕ್ರಿಸ್‌ಮಸ್‌ ಉಡುಗೊರೆಯನ್ನು ನೀವು ಹೊಂದಿಕೊಂಡಿಲ್ಲವೋ?

ಈ ಕ್ರಿಸ್‌ಮಸ್‌ ಉಡುಗೊರೆಯನ್ನು ನೀವು ಹೊಂದಿಕೊಂಡಿಲ್ಲವೋ?

ಕ್ರಿಸ್‌ಮಸ್‌ ಸಮಯ

ಇದು ಮತ್ತೆ ಕ್ರಿಸ್‌ಮಸ್‌ ಸಮಯ! ಪ್ರಪಂಚದಾದ್ಯಂತ ಜನರು ಸಂತೋಷ ಮತ್ತು ವಿನೋದದಿಂದ ಆಚರಿಸುವ ಸಮಯ.  ಕ್ರಿಸ್ಮಸ್ ನ ಹಿಂದಿನ ದಿನದಂದು ಸಾಂಟಾ ಕ್ಲಾಸ್ ಉಡುಗೊರೆಗಳನ್ನು ತರುವರೆಂದು ಅನೇಕ ಮಕ್ಕಳು ಕಾಯುತ್ತಾರೆ. ವ್ಯಾಪಾರಗಳಿಗೂ ಇದು ಅತ್ಯುತ್ತಮ ಕಾಲವಾಗಿದೆ. ಉಡುಗೊರೆಗಳು, ಅಲಂಕಾರಗಳು ಮತ್ತು ಸರಬರಾಜುಗಳನ್ನು ಖರೀದಿಸುವುದರಿಂದ ಮಾರಾಟವು ಬಹಳ ಹೆಚ್ಚಾಗುತ್ತದೆ. ಆದರೆ, ಹಬ್ಬದ ಸಡಗರದಲ್ಲಿ ಕ್ರಿಸ್‌ಮಸ್‌ನ ನಿಜವಾದ ಅರ್ಥವೇ ಕಳೆದು ಹೋಗುತ್ತದೆ.

ಹೇಗೆ ಎಲ್ಲಾ ಉಡುಗೊರೆಗಳನ್ನು ನೀಡುವಾತನು ತಾನೇ  ಉಡುಗೊರೆಯಾಗಿ ಬಂದನು ಎಂಬುದೇ  ನಿಜವಾದ ಕ್ರಿಸ್‌ಮಸ್ ನ ಅರ್ಥವಾಗಿದೆ.

ಕ್ರಿಸ್‌ಮಸ್ ಗೆ ಕಾರಣ

ಆದಿಯಲ್ಲಿ ದೇವರು ಇದ್ದನು. ಆತನು ಜಗತ್ತನ್ನು ಮತ್ತು ಅದರಲ್ಲಿರುವ ಎಲ್ಲವನ್ನೂ ಸೃಷ್ಟಿಸಿದನು. ತನ್ನ ಪ್ರೀತಿಯಿಂದ ದೇವರು ತನ್ನ ಸ್ವರೂಪದಲ್ಲಿ ಮನುಷ್ಯನನ್ನು ಸೃಷ್ಟಿಸಿದನು ಮತ್ತು ಅವನನ್ನು ಸುಂದರವಾದ ಉದ್ಯಾನವನದಲ್ಲಿ ಇರಿಸಿದನು. ಮನುಷ್ಯನು ದೇವರ ಆಜ್ಞೆಗಳನ್ನು ಉಲ್ಲಂಘಿಸಿದನು. ಈ ಅವಿಧೇಯತೆಯು ಪಾಪವಾಗಿತ್ತು ಮತ್ತು ಮನುಷ್ಯನನ್ನು ದೇವರಿಂದ ದೂರಮಾಡಿತು. ಅವರ ಪಾಪಗಳ ಕಾರಣದಿಂದಾಗಿ ದೇವರು ಮಾನವಕುಲವನ್ನು ಶಾಶ್ವತವಾಗಿ ನಾಶಮಾಡಬಹುದಿತ್ತು. ಆದರೆ, ಎಲ್ಲಾ ಜನರ ಪಾಪಗಳ ಪರಿಹಾರಕ್ಕೆ ಒಂದೇ ಅಂತಿಮ ಯಜ್ಞವಾಗಿ ಈ ಭೂಮಿಗೆ ರಕ್ಷಕನನ್ನು ಕಳುಹಿಸುವುದಾಗಿ ದೇವರು ಭರವಸೆ ನೀಡಿದ್ದನು. (ಯೆಶಾಯ 53).

“ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರದವರಿಗೆ 6:23). ಯೇಸು ದೇವರ ಮಗನು. ಅವನು ಪಾಪವಿಲ್ಲದೆ ಬದುಕಿದನು ಮತ್ತು ಅವನ ಎಲ್ಲಾ ಮಾರ್ಗಗಳಲ್ಲಿ ಪರಿಪೂರ್ಣನಾಗಿದ್ದನು. ಮೂವತ್ತು ವರ್ಷ ವಯಸ್ಸಿನಲ್ಲಿ, ಯೇಸು ತನ್ನ ತಂದೆಯಾದ ದೇವರ ಬಗ್ಗೆ ಜನರಿಗೆ ಕಲಿಸಲು ಪ್ರಾರಂಭಿಸಿದನು. ಆತನು ಕುರುಡರಿಗೆ ದೃಷ್ಟಿ ನೀಡುವುದು, ಅವರ ಕಾಯಿಲೆಗಳನ್ನು ಗುಣಪಡಿಸುವುದು ಮತ್ತು ಸತ್ತವರನ್ನು ಎಬ್ಬಿಸುವಂತಹ ಅನೇಕ ಅದ್ಭುತಗಳನ್ನು ಮಾಡಿದನು. ಎಲ್ಲಕ್ಕಿಂತ ಹೆಚ್ಚಾಗಿ, ಸ್ವರ್ಗದಲ್ಲಿ ಶಾಶ್ವತ ಜೀವನವನ್ನು ಹೊಂದುವ ಮಾರ್ಗವನ್ನು ಕಲಿಸಿದನು. ನಂತರ ಆತನು ಇಡೀ ಪ್ರಪಂಚದ ಪಾಪದ ಪ್ರಾಯಶ್ಚಿತ್ತ ಯಜ್ಞವಾಗಿ ತನ್ನ ಜೀವವನ್ನೇ ಕೊಟ್ಟನು.

ಯೋಹಾನ 3:16 ರಲ್ಲಿ ಬೈಬಲ್ ಹೇಳುತ್ತದೆ, “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.

ಯೇಸು ಕ್ರಿಸ್ತನು ತನ್ನ ಪ್ರಾಣವನ್ನುಪ್ರಾಯಶ್ಚಿತ್ತ ಯಜ್ಞವಾಗಿ ಶಿಲುಬೆಯ ಮೇಲೆ ಅರ್ಪಿಸಲು ಈ ಭೂಮಿಗೆ ಬಂದನು. ಆತನ ಮರಣದ ಮುಖಾಂತರ ನಮ್ಮ ಪಾಪಗಳ ಪ್ರಾಯಶ್ಚಿತ್ತವಾಯಿತು. ಇನ್ನು ಪಾಪಕ್ಕಾಗಿ ಯಜ್ಞ ಸಮರ್ಪಣೆಯ ಅಗತ್ಯವಿಲ್ಲ. ಹೀಗೆ ದೇವರು ತನ್ನ ವಾಗ್ದಾನಕ್ಕನುಗುಣವಾಗಿ ರಕ್ಷಕನನ್ನು ಕಳುಹಿಸಿಕೊಟ್ಟನು.

ಯೇಸುವನ್ನು ದುಷ್ಕರ್ಮಿಗಳು ಕೊಂದರೂ, ಮರಣವು ಆತನನ್ನು ಹಿಡಿಯಲು ಸಾಧ್ಯವಿರಲಿಲ್ಲ. ಮೂರು ದಿನಗಳ ನಂತರ, ಆತನು ಸಮಾಧಿಯನ್ನು ಜಯಿಸಿ ಎದ್ದು ಬಂದನು. ಆತನ ಪುನರುತ್ಥಾನದ ನಂತರದ ದಿನಗಳಲ್ಲಿ, ಯೇಸುವನ್ನು ಅನೇಕ ಜನರು ನೋಡಿದರು. ತನ್ನ ಶಿಷ್ಯರನ್ನುಆಶೀರ್ವದಿಸಿದ ನಂತರ, ಸ್ವರ್ಗಕ್ಕೆ ಏರಿ ಹೋದನು.

ಹೊಂದಿಕೊಳ್ಳಬೇಕಾದ ಉಡುಗೊರೆ

ನಾವು ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಟ್ಟು, ನಮ್ಮ ಜೀವಿತವನ್ನು ಆತನಿಗೆ ಒಪ್ಪಿಸಿಕೊಟ್ಟಾಗ, ಆತನ ರಕ್ತವು ನಮ್ಮ ಎಲ್ಲಾ ಪಾಪಗಳಿಂದ ನಮ್ಮನ್ನು ಶುದ್ಧೀಕರಿಸುತ್ತದೆ. ಈ ರಕ್ಷಣೆಯ ಉಡುಗೊರೆಯನ್ನು ಸ್ವೀಕರಿಸುವುದಾದರೆ, ನಾವು ದೇವರೊಂದಿಗೆ ಮತ್ತೆ ಒಂದಾಗುತ್ತೇವೆ. ಯೇಸು ಕ್ರಿಸ್ತನು ನಮ್ಮ ಸ್ವಂತ ರಕ್ಷಕನಾಗುತ್ತಾನೆ ಮತ್ತು ನಾವು ಆತನ ಮಕ್ಕಳಾಗುವ ಆನಂದ ನಮ್ಮದಾಗುತ್ತದೆ! ಒಂದು ದಿನ ಯೇಸು ಹಿಂತಿರುಗಿ ಬರಲಿದ್ದಾನೆ. ಆತನು ತನ್ನ ಭಕ್ತರನ್ನು ತನ್ನೊಡನೆ ಸ್ವರ್ಗಕ್ಕೆ ಕರೆದೊಯ್ಯಲಿದ್ದಾನೆ. ಅಲ್ಲಿ ಅವರು ದೇವರೊಂದಿಗೆ ಶಾಶ್ವತವಾಗಿ ಜೀವಿಸುವರು.

ಆತ್ಮೀಯ ಸ್ನೇಹಿತರೆ, ರಕ್ಷಣೆಯ ಉಡುಗೊರೆಗಿಂತ ಉತ್ತಮವಾದ ಉಡುಗೊರೆ ಇನ್ನೊಂದಿಲ್ಲ. ಜೀವಂತ ದೇವರ ಪುತ್ರರು ಮತ್ತು ಪುತ್ರಿಯರು ಎಂದು ಕರೆಯಿಸಿಕೊಳ್ಳುವುದಕ್ಕಿಂತ ಉತ್ತಮವಾದ ಭಾಗ್ಯಇನ್ನೊಂದಿಲ್ಲ. ಇಂತಹ ವರ್ಣಿಸಲಶಕ್ಯವಾದ, ಬೆಲೆಕಟ್ಟಲಾರದ ಉಡುಗೊರೆಯನ್ನು ನೀವು ಕಳೆದುಕೊಂಡರೆ ಪ್ರಪಂಚದ ಎಲ್ಲಾ ಉಡುಗೊರೆಗಳು ನಿಷ್ಪ್ರಯೋಜಕವಾಗುತ್ತವೆ.