ಕಷ್ಟದ ಸಮಯದಲ್ಲಿ ದೇವರನ್ನು ನಂಬುವ ಬಗ್ಗೆ 40 ಸತ್ಯವೇದದ(ಬೈಬಲ್) ವಚನಗಳು

Trust God Bible verses kannada

ದೇವರನ್ನು ನಂಬಲು ನಮ್ಮ ಹೋರಾಟ

ಕಡಿದಾದ ಸ್ಥಳದಿಂದ ಪ್ರಪಾತಕ್ಕೆ ಬೀಳುವ ವ್ಯಕ್ತಿಯ ಬಗ್ಗೆಒಂದು ಹಳೆಯ ಕಥೆಯಿದೆ. ಅವನು ಸಾಯಲಿಕ್ಕಿರುತ್ತಾನೆ, ಆದರೆ ಅವನು ಕೈಯನ್ನು ಚಾಚುವಾಗ ಒಂದು ಕೊಂಬೆಯನ್ನು ಕಂಡು, ಅದನ್ನು ಹಿಡಿಯುತ್ತಾನೆ.

“ಯಾರಾದರೂ ಇದ್ದೀರಾ?”

“ಹೌದು.”

“ನೀವು ಯಾರು?”

“ನಾನು ದೇವರು, ಮತ್ತು ನಾನು ನಿನ್ನನ್ನು ರಕ್ಷಿಸಲಿದ್ದೇನೆ.”

“ಅದ್ಭುತ. ನಾನು ಏನು ಮಾಡಲಿ?”

“ಹಿಡಿದಿರುವ ಕೊಂಬೆಯನ್ನು ಬಿಡು “

(ವಿರಾಮ.) “ಬೇರೆ ಯಾರಾದರೂ ಇದ್ದೀರಾ?”

ಜಾನ್ ಓರ್ಟ್‌ಬರ್ಗ್‌ನಿಂದ ತೆಗೆದುಕೊಳ್ಳಲಾಗಿದೆ, ಲವ್ ಬಿಯಾಂಡ್ ರೀಸನ್ (ಗ್ರ್ಯಾಂಡ್ ರಾಪಿಡ್ಸ್, MI: ಝೋಂಡರ್ವಾನ್, 1998).

ದೇವರ ವಾಕ್ಯ ಹೇಳುತ್ತದೆ , “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ಯಾಕಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ, ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6).

 ಅನಿಶ್ಚಿತತೆಯಿಂದ ಕೂಡಿರುವ ಈ  ಜಗತ್ತಿನಲ್ಲಿ, ಎಲ್ಲ ರೀತಿಯ  ಸಂಸ್ಕೃತಿಕ  ಹಾಗೂ ವೈಯಕ್ತಿಕ ಕಷ್ಟಗಳನ್ನು ತಡೆದುಕೊಳ್ಳುವ ಶಕ್ತಿಯ ಮೂಲವಿದೆ. ಇದು ದೇವರ ಮತ್ತು ಆತನ ಸರ್ವಶಕ್ತತೆಯ ಮೇಲೆ ವಿಶ್ವಾಸವಿಡುವ ಜನರ ಅಚಲವಾದ ನಂಬಿಕೆಯಾಗಿದೆ. ದೇವರು ಮಾತ್ರ ನಂಬಲರ್ಹನೆಂದು ನಮಗೆ ತಿಳಿದಿದ್ದರೂ, ಜೀವನದಲ್ಲಿನ  ಕಷ್ಟದ ಸಮಯಗಳು ನಮ್ಮ ಹೃದಯದಲ್ಲಿ ಅನುಮಾನದ ಬೀಜಗಳನ್ನು ಬಿತ್ತಬಹುದು.

ಜೀವನವು ಕಠಿಣವಾಗಿರಬಹುದು, ಆದರೆ ದೇವರು ಒಳ್ಳೆಯವನು ಎಂಬ ಅಂಶವನ್ನು ಮನುಷ್ಯರಾದ ನಾವು ಯಾವಾಗಲು ನೆನಪಿಸಿಕೊಳ್ಳಬೇಕು.

ಜೀವನದ ಎಲ್ಲಾ ಸಂದರ್ಭಗಳಲ್ಲಿ ನಾವು ದೇವರನ್ನು ನಂಬಬಹುದು ಎಂದು ನಮಗೆ ನೆನಪಿಸುವ ಬೈಬಲ್ ವಚನಗಳನ್ನು ನೋಡೋಣ.

1. ದೇವರ ಮಾರ್ಗದರ್ಶನದಲ್ಲಿ ನಂಬಿಕೆ: ಸತ್ಯವೇದ ವಚನಗಳು

ದೇವರ ಮಾರ್ಗದರ್ಶನದಲ್ಲಿ ನಂಬಿಕೆಯು ಶಾಂತಿ ಮತ್ತು ಭರವಸೆಯನ್ನು ತರುತ್ತದೆ. ನಮ್ಮ ಯೋಜನೆಗಳು ಮತ್ತು ಆಸೆಗಳನ್ನು ಆತನಿಗೆ ಒಪ್ಪಿಸುವ ಮೂಲಕ, ನಮ್ಮ ಜೀವನದ ಮೇಲೆ ಆತನ ಜ್ಞಾನ ಮತ್ತು ಸಾರ್ವಭೌಮತ್ವವನ್ನು ನಾವು ಅಂಗೀಕರಿಸುತ್ತೇವೆ. ಅನಿಶ್ಚಿತತೆಯ ಸಮಯದಲ್ಲೂ, ಆತನು ಒಂದು  ಯೋಜನೆಯನ್ನು ಹೊಂದಿದ್ದಾನೆ ಮತ್ತು ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಾನೆ ಎಂದು ತಿಳಿದುಕೊಂಡು ನಾವು ಆತನ ಮಾರ್ಗದರ್ಶನವನ್ನು ಅವಲಂಬಿಸಬಹುದು.

ಜ್ಞಾನೋಕ್ತಿಗಳು 3: 5-6 (KANJV-BSI) ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. 

ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.

ನೀನೇ ಬುದ್ಧಿವಂತನು ಎಂದೆಣಿಸದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.

ಜ್ಞಾನೋಕ್ತಿಗಳು 16: 3 (KANJV-BSI) ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ ನಿನ್ನ ಉದ್ದೇಶಗಳು ಸಫಲವಾಗುವವು.

ಕೀರ್ತನೆ 37:5 (KANJV-BSI) ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.

ಜ್ಞಾನೋಕ್ತಿಗಳು 30:5 (KANJV-BSI) ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು; ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ.

ಕೀರ್ತನೆ 143:8 (KANJV-BSI) ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ.

ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.

 ಈ ವಚನಗಳು ದೇವರ ಮಾರ್ಗದಲ್ಲಿ ಭರವಸೆಯಿಡಲು ಮತ್ತು ಆತನಿಗೆ ನಮ್ಮ ಮಾರ್ಗಗಳನ್ನು ಒಪ್ಪಿಸಲು ಪ್ರೋತ್ಸಾಹಿಸುತ್ತವೆ. ನಾವು ಆತನ ಜ್ಞಾನದ ಮೇಲೆ ಭರವಸವಿಟ್ಟಾಗ ಮತ್ತು ಆತನ ಯೋಜನೆಗಳನ್ನು ನಂಬಿದಾಗ, ಆತನು ನಮ್ಮ ಮಾರ್ಗಗಳನ್ನು ನಿರ್ದೇಶಿಸುತ್ತಾನೆ.

2.ಭಯದ ಸಮಯದಲ್ಲಿ ದೇವರಲ್ಲಿ ನಂಬಿಕೆ: ದೇವರ ವಾಕ್ಯಗಳು 

ಕೀರ್ತನೆ 56:3 (KANJV-BSI) ನನಗೆ ಹೆದರಿಕೆಯುಂಟಾದಾಗ ನಿನ್ನನ್ನೇ ಆಶ್ರಯಿಸಿಕೊಳ್ಳುವೆನು

ಯೆಶಾಯ 41:10 (KANJV-BSI) ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ; ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ. 

ಕೀರ್ತನೆ 91:2 (KANJV-BSI) ನಾನು ಯೆಹೋವನಿಗೆ – ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು ಎಂದು ಹೇಳುವೆನು.

ಕೀರ್ತನೆ 34:8 (KANJV-BSI) ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.

ಕೀರ್ತನೆಗಳು 112:7 (KANJV-BSI) ಅವನಿಗೆ ಕೆಟ್ಟ ಸುದ್ದಿಯ ಭಯವಿರುವದಿಲ್ಲ;ಯೆಹೋವನಲ್ಲಿ ಭರವಸವಿಟ್ಟಿರುವದರಿಂದ ಅವನ ಮನಸ್ಸು ಸ್ಥಿರವಾಗಿರುವದು.

  ಭಯ ಅಥವಾ ಆತಂಕದ ಸಮಯದಲ್ಲಿ, ಈ ವಾಕ್ಯಗಳು ದೇವರನ್ನು ಆಶ್ರಯಿಸುವಂತೆ  ಹಾಗೂ ಆತನ ಮೇಲೆ ನಂಬಿಕೆ ಇಡಲು ಸಹಾಯಿಸುತ್ತವೆ. ಇವು ಸವಾಲಿನ ಕ್ಷಣಗಳಲ್ಲಿ ಸಾಂತ್ವನದ ಮೂಲವಾಗಿವೆ. 

3. ದೇವರು ಕೊಡುವ  ರಕ್ಷಣೆಯಲ್ಲಿ ವಿಶ್ವಾಸ:

ಕೀರ್ತನೆ 9:10 (KANJV-BSI) ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು; ಯಾಕಂದರೆ ನಿನ್ನ ಮರೆಹೊಗುವವರನ್ನು ನೀನು ಕೈಬಿಡುವವನಲ್ಲ.

ನಹೂಮ 1:7 (KANJV-BSI) ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮರೆಹೊಕ್ಕವರನ್ನು ಬಲ್ಲನು.

ಕೀರ್ತನೆ 46:1 (KANJV-BSI) ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.

ಕೀರ್ತನೆ 125:1 (KANJV-BSI) ಯೆಹೋವನಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗೆ ಇದ್ದಾರೆ; ಅದು ಕದಲುವದಿಲ್ಲ, ಸದಾ ಸ್ಥಿರವಾಗಿರುತ್ತದೆ.

ಜ್ಞಾನೋಕ್ತಿ 3:26 (KANJV-BSI) ಯೆಹೋವನು ನಿನ್ನ ಭರವಸಕ್ಕೆ ಆಧಾರನಾಗಿದ್ದು ನಿನ್ನ ಕಾಲು ಪಾಶಕ್ಕೆ ಸಿಕ್ಕದಂತೆ ನಿನ್ನನ್ನು ಕಾಪಾಡುವನು.

ದೇವರಲ್ಲಿ ಭರವಸೆಯಿಡುವವರು ಆತನಲ್ಲಿ ರಕ್ಷಣೆ ಮತ್ತು ಭದ್ರತೆಯನ್ನು ಕಂಡುಕೊಳ್ಳುತ್ತಾರೆ ಎಂಬ ಆಲೋಚನೆಯನ್ನು ಈ ವಾಕ್ಯಗಳು ಎತ್ತಿ ತೋರಿಸುತ್ತವೆ. ಸಂಕಷ್ಟದ ಸಮಯದಲ್ಲಿ ಆತನು ಭದ್ರಕೋಟೆಯಾಗಿದ್ದಾನೆ.

4. ದೇವರ ನಂಬಿಗಸ್ತಿಕೆ ಮತ್ತು ಆಶೀರ್ವಾದಗಳಲ್ಲಿ ನಂಬಿಕೆ

ಕೀರ್ತನೆ 37:3 (KANJV-BSI) ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.

ಕೀರ್ತನೆ 20:7 (KANJV-BSI) ಕೆಲವರು ರಥಬಲದಲ್ಲಿ, ಕೆಲವರು ಅಶ್ವ ಬಲದಲ್ಲಿ ಹೆಚ್ಚಳಪಡುತ್ತಾರೆ;ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ.

ಕೀರ್ತನೆ 12:6 (KANJV-BSI) ಯೆಹೋವನ ಮಾತುಗಳು ಯಥಾರ್ಥವಾದವುಗಳೇ; ಅವು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬೆಳ್ಳಿಯೋಪಾದಿಯಲ್ಲಿವೆ.

ಕೀರ್ತನೆ 28:7 (KANJV-BSI) ಯೆಹೋವನು ನನಗೆ ಬಲವೂ ಗುರಾಣಿಯೂ ಆಗಿದ್ದಾನೆ; ನಾನು ಆತನಲ್ಲಿ ಭರವಸವಿಟ್ಟೆನು, ನನಗೆ ಸಹಾಯವು ಉಂಟಾಯಿತು. ಆದಕಾರಣ ನನ್ನ ಹೃದಯವು ಹರ್ಷಿಸುವದು; ಕೀರ್ತನಾರೂಪವಾಗಿ ಆತನನ್ನು ಸ್ತುತಿಸುವೆನು.

ದೇವರ ಮೇಲಿನ ನಂಬಿಕೆಯು ನಮ್ಮ ಜೀವನದಲ್ಲಿ ಆಶೀರ್ವಾದಕ್ಕೆ ಕಾರಣವಾಗುತ್ತದೆ. ತನ್ನಲ್ಲಿ ನಂಬಿಕೆಯಿಡುವವರ ಅವಶ್ಯಕತೆಗಳನ್ನು ಒದಗಿಸುತ್ತಾನೆ ಮತ್ತು ಸಹಾಯ ಮಾಡುತ್ತಾನೆ.

5. ಯಾವುದರ ಬಗ್ಗೆಯೂ ಚಿಂತಿಸಬೇಡಿ, ದೇವರಲ್ಲಿ ನಂಬಿಕೆ ಇಡಿ

ಜ್ಞಾನೋಕ್ತಿ 29:25 (KANJV-BSI) ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.

1 ಪೇತ್ರ 5:7 (KANJV-BSI) ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ

ಮತ್ತಾಯ 6: 25-34 (KANJV-BSI) ಈ ಕಾರಣದಿಂದ – ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬದಾಗಿ ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ. 

26ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ? 27ಚಿಂತೆಮಾಡಿಮಾಡಿ ಒಂದು ಮೊಳ ಉದ್ದ ಬೆಳೆಯುವದು ನಿಮ್ಮಲ್ಲಿ ಯಾರಿಂದಾದೀತು? 

28ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ; ಅವು ದುಡಿಯುವದಿಲ್ಲ, ನೂಲುವದಿಲ್ಲ;

 29ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ. 

30ಎಲೈ ಅಲ್ಪವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ. 

31ಹೀಗಿರುವದರಿಂದ – ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. 32ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. 

33ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು. 

34ಆದದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.

ಕೀರ್ತನೆ 62:8 (KANJV-BSI) ಜನರೇ, ಯಾವಾಗಲೂ ಆತನನ್ನೇ ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ; ದೇವರು ನಮ್ಮ ಆಶ್ರಯವು. ಸೆಲಾ.

ಫಿಲಿಪ್ಪಿ 4: 6-7 ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. 

7ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.

ಕೀರ್ತನೆ 55:22 (KANJV-BSI) ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು. 

ಈ ವಚನಗಳು ಜೀವನದ ಸವಾಲುಗಳ ಬಗ್ಗೆ ಚಿಂತಿಸದೆ ನಮ್ಮ ಚಿಂತಾಭಾರವನ್ನು ದೇವರ ಮೇಲೆ ಹಾಕಲು ಮತ್ತು ಆತನಲ್ಲಿ ಶಾಂತಿ, ಭದ್ರತೆಯನ್ನು ಕಂಡುಕೊಳ್ಳಲು ನಮಗೆ ಕಲಿಸುತ್ತದೆ. ದೇವರು ನಮ್ಮ ತಂದೆ, ಆತನು ನಮಗಾಗಿ ಚಿಂತಿಸುತ್ತಾನೆ . ದೇವರಲ್ಲಿ ನಂಬಿಕೆ ಇಟ್ಟವರು ಯಾವುದರ ಬಗ್ಗೆಯೂ ಚಿಂತೆ ಮಾಡಬೇಕಾಗಿಲ್ಲ.

6. ಕಷ್ಟದ ಸಮಯದಲ್ಲಿ ದೇವರಲ್ಲಿ ಭರವಸೆ ಮತ್ತು ವಿಶ್ವಾಸ

ಯೆಶಾಯ 12:2 (KANJV-BSI) ಇಗೋ ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸಪಡುವೆನು; ನನ್ನ ಬಲವೂ ಕೀರ್ತನೆಯೂ ಯಾಹುಯೆಹೋವನಷ್ಟೆ, ಆತನೇ ನನಗೆ ರಕ್ಷಕನಾದನು ಎಂಬದೇ.

ರೋಮ 15:13 (KANJV-BSI) ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಶಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.

2 ಕೊರಿಂಥ 3:4-5 (KANJV-BSI) ಇಂಥ ಭರವಸವು ಕ್ರಿಸ್ತನ ಮೂಲಕವೇ ದೇವರ ಮುಂದೆ ನಮಗುಂಟು. 

5ನಮ್ಮಿಂದಲೇ ಏನಾದರೂ ಉಂಟಾಯಿತೆಂದು ತೀರ್ಮಾನಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು;

1 ತಿಮೋಥಿ 4:10 (KANJV-BSI) ಇದಕ್ಕಾಗಿ ನಾವು ಕಷ್ಟಪಡುತ್ತೇವೆ, ಹೋರಾಡುತ್ತೇವೆ, ಯಾಕಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ.

 ದೇವರನ್ನು ನಂಬುವುದು ನಮಗೆ ಭರವಸೆ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ. ಆತನು ನಮ್ಮ ಶಕ್ತಿಯ ಮೂಲ ಮತ್ತು ನಮ್ಮ ಸಂತೋಷಕ್ಕೆ ಕಾರಣ.

7. ದೇವರ ಯೋಜನೆಗಳು ಮತ್ತು ಸಮಯವನ್ನು ನಂಬುವುದು: ದೇವರು ನಂಬಿಗಸ್ಥನು 

ಯೆರೆಮಿಯ 17:7 (KANJV-BSI) ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ, ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು.

ಕೀರ್ತನೆ 62:2 (KANJV-BSI) ಆತನೇ ನನಗೆ ಶರಣನೂ ರಕ್ಷಕನೂ ದುರ್ಗವೂ; ನಾನು ಕದಲಿದರೂ ಬೀಳೆನು.

ಕೀರ್ತನೆ 37:7 (KANJV-BSI) ಯೆಹೋವನ ಸನ್ನಿಧಿಯಲ್ಲಿ ಶಾಂತನಾಗಿ ಆತನಿಗೋಸ್ಕರ ಕಾದಿರು; ಕುಯುಕ್ತಿಗಳನ್ನು ನೆರವೇರಿಸಿಕೊಂಡು ಅಭಿವೃದ್ಧಿ ಹೊಂದುವವನನ್ನು ನೋಡಿ ಉರಿಗೊಳ್ಳಬೇಡ.

ಯೆರೆಮಿಯ 29:11 (KANJV-BSI) ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ.

ಕೆಲವೊಮ್ಮೆ ಜೀವನದಲ್ಲಿ ನಮ್ಮ ಯೋಜನೆಗಳ ಪ್ರಕಾರ ವಿಷಯಗಳು ನಡೆಯದಿದ್ದಾಗ ನಾವು ತಾಳ್ಮೆ ಕಳೆದುಕೊಂಡು ಚಂಚಲರಾಗುತ್ತೇವೆ. ಈ ವಚನಗಳು, ನಾವು ಸಂಪೂರ್ಣವಾಗಿ ದೇವರನ್ನು ಅರ್ಥಮಾಡಿಕೊಳ್ಳದಿದ್ದರೂ ಅಥವಾ ಆತನ ಚಿತ್ತವನ್ನು ತಿಳಿಯದಿದ್ದರೂ ಸಹ, ದೇವರ ಯೋಜನೆಗಳು ಮತ್ತು ಸಮಯವನ್ನು ನಂಬುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ. 

8. ಆಶ್ರಯ ಮತ್ತು ಭರವಸೆಯನ್ನು ಹುಡುಕುವುದು:

ಯೆಶಾಯ 50:10 (KANJV-BSI) ನಿಮ್ಮೊಳಗೆ ಯಾವನು ಯೆಹೋವನಲ್ಲಿ ಭಯಭಕ್ತಿಯಿಟ್ಟು ಆತನ ಸೇವಕನ ಮಾತನ್ನು ಕೇಳುವನು? ಕತ್ತಲಲ್ಲಿ ನಡೆಯುತ್ತಾ ಬೆಳಕಿಲ್ಲದವನು ಯೆಹೋವನ ನಾಮದಲ್ಲಿ ಭರವಸವಿಟ್ಟು ತನ್ನ ದೇವರನ್ನು ಆಧಾರಮಾಡಿಕೊಳ್ಳಲಿ.

ಕೀರ್ತನೆ 43:5 (KANJV-BSI) ನನ್ನ ಮನವೇ, ನೀನು ಕುಗ್ಗಿಹೋಗಿರುವದೇನು? ಹೀಗೆ ವ್ಯಥೆಪಡುವದೇಕೆ? ದೇವರನ್ನು ನಿರೀಕ್ಷಿಸು; ಆತನೇ ನನಗೆ ರಕ್ಷಕನೂ ದೇವರೂ ಆಗಿದ್ದಾನೆ; ನಾನು ಇನ್ನೂ ಆತನನ್ನು ಸ್ತುತಿಸುತ್ತಿರುವೆನು.

ಕೀರ್ತನೆ 40:4 (KANJV-BSI) ಯಾವನು ಅಹಂಕಾರಿಗಳಲ್ಲಿಯೂ ಸುಳ್ಳನ್ನು ಹಿಂಬಾಲಿಸುವವರಲ್ಲಿಯೂ ಸೇರದೆ ಯೆಹೋವನನ್ನೇ ನಂಬುತ್ತಾನೋ ಅವನೇ ಧನ್ಯನು.

ಇಬ್ರಿಯ 6:19 (KANJV-BSI) ಈ ಆಧಾರಗಳನ್ನು ಕೊಟ್ಟದ್ದರಲ್ಲಿ ದೇವರು ಸುಳ್ಳಾಡಿರಲಾರನು. ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ ಆಗಿದೆ. ಅದು ತೆರೆಯೊಳಗಣ ದೇವಸಾನ್ನಿಧ್ಯವನ್ನು ಪ್ರವೇಶಿಸುವಂಥದು.

ಅನಿಶ್ಚಿತತೆ ಮತ್ತು ಕತ್ತಲೆಯ ಸಮಯದಲ್ಲಿಯೂ ಸಹ ದೇವರ ಮೇಲಿನ ನಂಬಿಕೆಯು ನಮಗೆ ಆಶ್ರಯ ಮತ್ತು ಭರವಸೆಯನ್ನು  ಒದಗಿಸುತ್ತದೆ.

9. ದೇವರನ್ನು ಶಾಶ್ವತವಾಗಿ ನಂಬಿರಿ: ನಿಮ್ಮ ಧೃಷ್ಟಿಯನ್ನು ದೇವರ ಮೇಲೆ ಇಡಿರಿ 

ಯೆಶಾಯ 26:4 (KANJV-BSI) ಯೆಹೋವನಲ್ಲಿ ಸದಾ ಭರವಸವಿಡಿರಿ; ಯಾಹುಯೆಹೋವನು ಶಾಶ್ವತವಾಗಿ ಆಶ್ರಯಗಿರಿಯಾಗಿದ್ದಾನೆ.

2 ಸಮುವೇಲ 22:31 (KANJV-BSI) ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.

ಈ ವಾಕ್ಯಗಳು ‘ಪ್ರಪಂಚದ ಭಾರವನ್ನು ನಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕಾಗಿಲ್ಲ’ ಎಂದು ನಮಗೆ ನೆನಪಿಸುತ್ತದೆ. ಬದಲಾಗಿ, ನಾವು ನಮ್ಮ ಆತಂಕಗಳು, ಭಯಗಳು ಮತ್ತು ಅನುಮಾನಗಳನ್ನು ದೇವರ ಪ್ರೀತಿಯ ಮತ್ತು ಅಚಲವಾದ ಶಕ್ತಿಯ ಮೇಲೆ ಹಾಕಬಹುದು – ಅದು ಸರ್ವಶಕ್ತನ ಆಶ್ರಯವೇ. ಭಯದ ಕ್ಷಣಗಳಲ್ಲಿ, ಭವಿಷ್ಯವು ಅನಿಶ್ಚಿತವಾಗಿ ತೋರಿದಾಗ ಅಥವಾ ನಾವು ಪ್ರತಿಕೂಲತೆಯನ್ನು ಎದುರಿಸಿದಾಗ, ಈ ವಚನಗಳು ದೇವರ ದೃಢವಾದ ಸನ್ನಿಧಿಯಲ್ಲಿ ಆಶ್ರಯ ಪಡೆಯಲು ನಮ್ಮನ್ನು ಪ್ರೋತ್ಸಾಹಿಸುತ್ತವೆ.

ನಾವು ಈ ವಾಕ್ಯಗಳನ್ನು ಆಲೋಚಿಸುತ್ತಿರುವಾಗ, ದೇವರಲ್ಲಿ ಆಳವಾದ ನಂಬಿಕೆಯನ್ನು ಬೆಳೆಸಲು ಅದು ನಮಗೆ ಸ್ಫೂರ್ತಿ ನೀಡುತ್ತದೆ. ನಾವು ಆತನ ಮಾರ್ಗದರ್ಶನದಲ್ಲಿ ಸಮಾಧಾನವನ್ನು, ಆತನ ವಾಗ್ದಾನಗಳಲ್ಲಿ ಬಲವನ್ನು ಮತ್ತು ಆತನ ಬದಲಾಗದ ಪ್ರೀತಿಯಲ್ಲಿ ಭರವಸೆಯನ್ನು ಕಂಡುಕೊಳ್ಳೋಣ. ಸತ್ಯವೇದವು ಹೇಳುತ್ತದೆ, “ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ. ರೋಮ 8:28 (KANJV-BSI).”

  “ನೀನು ಯೆಹೋವನಲ್ಲಿ ಭರವಸವಿಡಬೇಕೆಂದು ಅವುಗಳನ್ನು ಈ ದಿನ ನಿನಗೇ ತಿಳಿಯಪಡಿಸಿದ್ದೇನೆ. – ಜ್ಞಾನೋಕ್ತಿ 22:19 (KANJV-BSI)”