ಮರಣವನ್ನು ಜಯಿಸಿದ ಮನುಷ್ಯ! 

Marana jayisida

ಮರಣವನ್ನು ತಡೆಯಬಹುದೇ?

ಮರಣ ಅನಿವಾರ್ಯವಾಗಿರುವ ಜಗತ್ತಿನಲ್ಲಿ ನಾವಿದ್ದೇವೆ. ಮಾನವ ಜನಾಂಗವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, ಆದರೆ ಸಾವಿನ ರಹಸ್ಯವನ್ನು ಅರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಮನುಷ್ಯನ ಆಯುಷ್ಯವನ್ನು ಹೆಚ್ಚಿಸುವ  ಕುರಿತು ಸಂಶೋಧನೆಯು ಮುಂದುವರಿದರೂ, ಯಾವುದೇ ಸ್ಪಷ್ಟವಾದ ಉತ್ತರಗಳನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಮರಣವನ್ನು ನಿಜವಾಗಿಯೂ ಸೋಲಿಸಬಹುದೇ? ಮರಣದ ನಂತರ ಏನಾಗುತ್ತದೆ?

ಸಾಯುವುದಕ್ಕಾಗಿಯೇ ಹುಟ್ಟಿದ ಮನುಷ್ಯ

ಈ ಈಸ್ಟರ್ ದಿನದಂದು, ಸಾಯುವುದಕ್ಕಾಗಿಯೇ ಜನಿಸಿದ ಮನುಷ್ಯನನ್ನು ನೋಡೋಣ. ಏನು !!! ಸಾಯುವುದಕ್ಕಾಗಿಯೇ ಹುಟ್ಟಿದ್ದೇ? ಹೌದು, ಆತನು ಮಾನವಕುಲದ ಪಾಪಗಳಿಗಾಗಿ ಸಾಯಲು ಜನಿಸಿದನು. ಯೋಹಾನ 3:16 ಹೇಳುತ್ತದೆ “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ದೇವ ಕುಮಾರನಾದ ಯೇಸು ಕ್ರಿಸ್ತನು ಮಾನವಕುಲವನ್ನು ಕಾಪಾಡುವ ಸಲುವಾಗಿ ಈ ಭೂಮಿಗೆ ಬಂದನು. ರೋಮಾಪುರದವರಿಗೆ 3:23 ರಲ್ಲಿ ಬೈಬಲ್ ಹೇಳುತ್ತದೆ – “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” ನಾವು ಹುಟ್ಟಿದ ಕ್ಷಣದಿಂದ ನಮ್ಮಲ್ಲಿ ಪಾಪದ ಗುಣವಿರುತ್ತದೆ . ಯಾರೂ ನಮಗೆ ಸುಳ್ಳು ಅಥವಾ ಕದಿಯಲುಕಲಿಸಿಕೊಡುವುದಿಲ್ಲ. ಇದು ಬಿದ್ದುಹೋದ ಮಾನವನ ಸಹಜ ಲಕ್ಷಣ. ತರ್ಕಿಸುವುದಾದರೆ, ಪ್ರತಿ ಪಾಪಿಗೆ ಶಿಕ್ಷೆಯಾಗುತ್ತದೆ. ದೇವರ ನ್ಯಾಯಾಲಯದಲ್ಲಿ ಪಾಪಕ್ಕೆ ತೀರ್ಪು ಏನೆಂದು ಯೋಚಿಸುವುದಾದರೆ ದೇವರು ಪಾಪವನ್ನು ಮರಣದಿಂದ ಶಿಕ್ಷಿಸುತ್ತಾನೆ ಮತ್ತು ಮನುಷ್ಯನು ಆ ಶಿಕ್ಷೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಆದಾಗ್ಯೂ, ಯೇಸು ಕ್ರಿಸ್ತನು ತನ್ನ ಮರಣದ ಮೂಲಕ ಮಾನವಕುಲದ ಪಾಪದ ಶಿಕ್ಷೆಯನ್ನು ತನ್ನ ಮೇಲೆ ತೆಗೆದುಕೊಂಡನು. ಯೇಸುಕ್ರಿಸ್ತನ ಕ್ರೂಜೆಯ ಕ್ರೂರ ಮರಣವು ಮನುಷ್ಯನ ಪಾಪದ ಭಾರವನ್ನು ತೋರಿಸುತ್ತದೆ.

ಆದರೆ, ಆತನ ಕಥೆ ಸಾವಿನೊಂದಿಗೆ ಕೊನೆಗೊಳ್ಳುತ್ತದೆಯೇ?

ಸತ್ತವರೊಳಗಿಂದ ಎದ್ದ ಮನುಷ್ಯ

ಲೂಕನ ಸುವಾರ್ತೆ ಅಧ್ಯಾಯ 24 ರ ಪ್ರಕಾರ, ಯೇಸುವನ್ನು ಸಮಾಧಿ ಮಾಡಿದ ಸಮಾಧಿಯಿಂದ ಕಲ್ಲು ಹೇಗೆ ಉರುಳಿಸಲ್ಪಟ್ಟಿತು ಮತ್ತು ಯೇಸು ಎದ್ದಿದ್ದಾನೆ ಎಂದು ದೇವದೂತರು ಹೇಗೆ ಘೋಷಿಸಿದರು ಎಂಬ ಅದ್ಭುತ ಕಥೆಯನ್ನು ನಾವು ನೋಡುತ್ತೇವೆ. ಇದು ಬಹುಶಃ ನಿಜವಾಗಿರಬಹುದೇ? ಪ್ರತಿ ಮಾನವ ಅನುಭವವನ್ನು ಪ್ರತ್ಯಕ್ಷ ಸಾಕ್ಷಿಗಳಿಂದ ಮೌಲ್ಯೀಕರಿಸಬೇಕು. ನ್ಯಾಯಾಲಯಗಳಲ್ಲಿ ಇಂದಿಗೂ ಪ್ರಕರಣದ ಅರ್ಹತೆಯನ್ನು ನಿರ್ಧರಿಸುವುದರಲ್ಲಿ  ಪ್ರತ್ಯಕ್ಷದರ್ಶಿಗಳ  ಹಾಗು ಸಾಕ್ಷಿಗಳ ಸಂಖ್ಯೆ ಬಹಳ ಮುಖ್ಯವೆಂದು ನಾವು ನೋಡುತ್ತೇವೆ. ಈ ನಿರ್ದಿಷ್ಟ ಘಟನೆಯಲ್ಲಿ ಹಲವಾರು ಪ್ರತ್ಯಕ್ಷದರ್ಶಿಗಳನ್ನು ನೋಡುತ್ತೇವೆ. ಯೇಸುಕ್ರಿಸ್ತನ ಮರಣ ಮತ್ತು ಪುನರುತ್ಥಾನವನ್ನು ಮುಖ್ಯವಾಗಿ ಮತ್ತಾಯ, ಮಾರ್ಕ, ಲೂಕ  ಮತ್ತು ಯೋಹಾನ ಈ ನಾಲ್ಕು ಸುವಾರ್ತೆಗಳಲ್ಲಿ ಹಾಗೂ ಇತರ ಐತಿಹಾಸಿಕ ಪುಸ್ತಕಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಮಗ್ಧಲದ  ಮರಿಯಳು  ಎಂಬ ಸ್ತ್ರೀಗೆ ಯೇಸುಕ್ರಿಸ್ತನು ಮೊದಲು ಕಾಣಿಸಿಕೊಂಡನು  ಮತ್ತು ಆನಂತರ ಆತನ ಶಿಷ್ಯರಿಗೆ ಸಹ ಕಾಣಿಸಿಕೊಂಡನು. ಯೇಸು ತನ್ನ ಶಿಷ್ಯರ ಜೊತೆಯಲ್ಲಿದ್ದಾಗ, ಅವರಿಗೆ ತನ್ನ ಕೈ ಮತ್ತು ಪಾದಗಳನ್ನು ತೋರಿಸಿದನು, “ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿರಿ, ನಾನೇ ಅಲ್ಲವೇ. ನನ್ನನ್ನು ಮುಟ್ಟಿನೋಡಿರಿ, ನಿಮಗೆ ಕಾಣುವ ಪ್ರಕಾರ ನನಗೆ ಮಾಂಸವೂ ಎಲುಬುಗಳೂ ಉಂಟು; ಅವು ಭೂತಕ್ಕಿಲ್ಲ ಎಂದು ಹೇಳಿದನು.” ಸತ್ತ ಮತ್ತು ಮತ್ತೆ ಬದುಕಿದ ವ್ಯಕ್ತಿಯ ಇತಿಹಾಸದಲ್ಲಿ ದಾಖಲಾದ ಏಕೈಕ ಅಧ್ಭುತ ಇದಾಗಿದೆ. ಯೇಸು ಕ್ರಿಸ್ತನು ಮರಣಹೊಂದಿದನು ಮತ್ತು ಪುನರುತ್ಥಾನಗೊಂಡನು ಮಾತ್ರವಲ್ಲದೆ, ತನ್ನನ್ನು ನಂಬುವವರಿಗೆ ಒಂದು ದಿನ ತಿರುಗಿ ಬರುತ್ತೇನೆಂದು ಭರವಸೆ ನೀಡಿ ಸ್ವರ್ಗಕ್ಕೆ ಏರಿ ಹೋದನು. 

ಆತನನ್ನು ನಂಬುವವರೆಲ್ಲರಿಗೆ ಶಾಶ್ವತ ಜೀವನ, ದೇವರೊಟ್ಟಿಗೆ. ಅದು ನಿಜವೇ? ಹೌದು. ಯೇಸು ಕ್ರಿಸ್ತನು ಯೋಹಾನ 11:26 ರಲ್ಲಿಹೇಳಿದ್ದು, “ನಾನೇ ಪುನರುತ್ಥಾನವೂ, ಜೀವವೂ ಆಗಿದ್ದೇನೆ. ನನ್ನನ್ನು ನಂಬುವವನು ಸತ್ತರೂ ಬದುಕುವನು.”

ಯೇಸು ಕ್ರಿಸ್ತನಲ್ಲಿ ಶಾಶ್ವತ ಜೀವನ

ದೈಹಿಕ ಮರಣವನ್ನು ತಡೆಯಲು ಎಂದಿಗೂ ಸಾಧ್ಯವಿಲ್ಲ ಆದರೆ ಶಾಶ್ವತವಾಗಿ ಬದುಕುವ ನಮ್ಮ ಆತ್ಮದ ಭವಿಷ್ಯವನ್ನು ನಾವು ನಿರ್ಧರಿಸಬಹುದು. ನಿಮ್ಮಆತ್ಮದ ಮೋಕ್ಷವನ್ನು ಗಳಿಸುವುದು ಹೇಗೆ? ಕರ್ತನಾದ ಯೇಸು ಕ್ರಿಸ್ತನನ್ನು ನಂಬಿರಿ, ಅವನು ನಿಮ್ಮ ಪಾಪಗಳಿಗಾಗಿ ಸತ್ತನು. ನೀವು ಪಾಪಿ ಎಂದು ಒಪ್ಪಿಕೊಳ್ಳಿ. ನಿಮ್ಮ ಪಾಪಗಳನ್ನು ಅರಿಕೆ ಮಾಡಿ ಮತ್ತು ಪಶ್ಚಾತ್ತಾಪ ಪಡಿರಿ. ಆತನನ್ನು ನಿಮ್ಮ ಜೀವಿತದ ಪ್ರಭುವಾಗಿ ಸ್ವೀಕರಿಸಿ. ಆತನು ನಿಮಗೆ ಶಾಶ್ವತ ಜೀವನವನ್ನು ನೀಡುವುದು ಮಾತ್ರವಲ್ಲದೆ ನಿಮ್ಮ ಹೃದಯದಲ್ಲಿ ವಾಸಿಸಲು ಪ್ರಾರಂಭಿಸುತ್ತಾನೆ.

ಸಂತೋಷಿಸು! ಭಯ ಪಡಬೇಡ ! ಮನಶ್ಯಾ೦ತಿ ! ಯೇಸು ಕ್ರಿಸ್ತನು ತನ್ನ ಪುನರತ್ಥಾನದ ನಂತರ ತನ್ನ ಶಿಷ್ಯರನ್ನು ನೋಡಿದಾಗ ಬಳಸಿದ ಪದಗಳು ಇವು. ಯುದ್ಧಗಳು, ಸಂಕಟಗಳು, ರೋಗಗಳು ಮತ್ತು ಸಾವು ಇವೆಲ್ಲವುಗಳ ಈ ಮುರಿದ ಜಗತ್ತಿನಲ್ಲಿ, ಯೇಸು ಶಾಂತಿ, ಸಂತೋಷ ಮತ್ತು ಸಾವಿನ ಭಯದಿಂದ ಶಾಶ್ವತವಾಗಿ ಸ್ವಾತಂತ್ರ್ಯವನ್ನು ನೀಡುತ್ತಾನೆ. ನೀವು ಅವನನ್ನು ಸ್ವೀಕರಿಸುತ್ತೀರಾ ಮತ್ತು ಇಂದು ನಿಮ್ಮ ಹೃದಯದಲ್ಲಿ ಆತನು ವಾಸಿಸಲು ಅವಕಾಶ ನೀಡುತ್ತೀರಾ? ಈ ಈಸ್ಟರ್ ದಿನದಂದು, ಪುನರುತ್ಥಾನವಾದ ಯೇಸು ಕ್ರಿಸ್ತನು ನಿಮಗೆ ಹೊಸ ಜೀವನವನ್ನು ನೀಡಲಿ.