ಪ್ರೀತಿ ಮತ್ತು ಸಂಬಂಧ – ಸಾಮಾನ್ಯ ಗ್ರಹಿಕೆ
‘ಪ್ರೀತಿ’ ಮತ್ತು ‘ಸಂಬಂಧ’ ಎಂಬ ಪದಗಳನ್ನು ನಾವು ಕೇಳಿದಾಗಲೆಲ್ಲಾ, ನಾವು ಅದನ್ನು ಸಾಮಾನ್ಯವಾಗಿ ದಂಪತಿಗಳ ನಡುವಿನ ಸಂಬಂಧದೊಂದಿಗೆ ಅಥವಾ ಇಬ್ಬರು ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದಾಗಿ ಆಲೋಚಿಸುತ್ತೇವೆ. ಸಮಾಜವು ಸಂಬಂಧವನ್ನು ಅತಿ ಮುಖ್ಯವೆಂದು ಪರಿಗಣಿಸುವುದರಿಂದ ನಾವು ಪ್ರೀತಿ, ಸಂಬಂಧ ಎಂದರೆ ಗಂಡು ಹೆಣ್ಣಿನ ಸಂಬಂಧ ಎಂದೇ ನೆನಸುತ್ತೇವೆ.
ಆದರೆ ಇದರ ನಿಜ ಅರ್ಥ ಏನೆಂದರೆ ಸಂಬಂಧವು ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ಹೊಂದಿಕೆಯಾಗಿದೆ. ತಂದೆ/ತಾಯಿ ಮತ್ತು ಮಗು, ಶಿಕ್ಷಕ ಮತ್ತು ವಿದ್ಯಾರ್ಥಿ ಮತ್ತು ಇಬ್ಬರು ಸ್ನೇಹಿತರ ನಡುವಿನ ಸಂಪರ್ಕ, ಇತ್ಯಾದಿ- ಇವುಗಳು ಕೆಲವು ಉದಾಹರಣೆಗಳು.
ಸಾಮ್ಯತೆಗಳು, ಇಷ್ಟಗಳು, ನಿರೀಕ್ಷೆಗಳು ಮತ್ತು ಪರಸ್ಪರ ಹೊಂದಾಣಿಕೆ ಯಾವುದೇ ಸಂಬಂಧವನ್ನು ರೂಪಿಸುವುದನ್ನು ಕಾಣಬಹುದು.
ಪ್ರೀತಿಯ ಅಂಶ
ಸಂಬಂಧಗಳು ತನ್ನದೇ ಆದ ಬಿರುಕುಗಳಿಲ್ಲದೆ ಇರುವುದಿಲ್ಲ. ಆದರೆ ಕೊನೆಯಲ್ಲಿ, ಒಂದು ಸಾಮಾನ್ಯ ಅಂಶ- ‘ಪ್ರೀತಿ’ಯಿಂದಾಗಿ ನಾವು ಇನ್ನೂ ಆ ಸಂಬಂಧದಲ್ಲಿ ಮುಂದುವರಿಯುತ್ತೇವೆ.
ಮಗು ಯಾವುದೇ ತಪ್ಪು ಮಾಡಿದರೂ ಅಥವಾ ತಂದೆ/ತಾಯಿ ಯಾವ ರೀತಿಯ ಶಿಕ್ಷೆಯನ್ನು ನೀಡಿದರೂ, ತಂದೆ/ತಾಯಿ ಮತ್ತು ಮಗುವಿನ ನಡುವಿನ ಪ್ರೀತಿಯು ಇದ್ದೇ ಇರುತ್ತದೆ. ಒಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿ ಕಡಿಮೆ ಅಂಕಗಳನ್ನು ಪಡೆದರೂ ಅಥವಾ ತರಗತಿಯಲ್ಲಿ ಅವನು ಸೃಷ್ಟಿಸುವ ಗಲಾಟೆಯ ನಡುವೆಯೂ ಸಹಾಯ ಮತ್ತು ಮಾರ್ಗದರ್ಶನ ಕೊಡುವುದನ್ನು ಮುಂದುವರೆಸುತ್ತಾನೆ. ವಾದ ಅಥವಾ ಭಿನ್ನಾಭಿಪ್ರಾಯದ ನಡುವೆಯೂ ಸ್ನೇಹಿತರು ತಮ್ಮ ನಡುವಿನ ಸ್ನೇಹವನ್ನು ಉಳಿಸಿಕೊಳ್ಳಲು ಬಯಸುತ್ತಾರೆ.
ನೋಡಿ, ಇದು ಎಷ್ಟು ಸರಳವಾಗಿದೆ? ಪ್ರೀತಿಯು ಎಲ್ಲಾ ರೀತಿಯ ಸಂಬಂಧಗಳಿಗೆ ಆಧಾರವಾಗಿದೆ. ನಾವು ಪಡೆಯುವ ಪ್ರೀತಿಯ ಆಧಾರದ ಮೇಲೆ ನಾವು ಸಂಬಂಧಗಳನ್ನು ಆರಿಸಿಕೊಳ್ಳುತ್ತೇವೆ. ಯಾವುದೇ ಸಂಬಂಧವನ್ನು ಕಟ್ಟುವ ಅಂಶ ಪ್ರೀತಿಯಾಗಿದೆ ಮತ್ತು ನಿಜವಾದ ಪ್ರೀತಿ ಸಂಬಂಧಗಳನ್ನು ಉಳಿಸುತ್ತದೆ.
ಎಲ್ಲರನ್ನೂ ಪ್ರೀತಿಸುವ (ಪರಲೋಕದ) ತಂದೆ
ಈ ಸಮಯದಲ್ಲಿ ಇನ್ನೊಂದು ರೀತಿಯ ತಂದೆ – ಮಗುವಿನ ಸಂಬಂಧವನ್ನು ನಿಮಗೆ ಪರಿಚಯಿಸಲು ಇಚ್ಚಿಸುತ್ತೇನೆ. ಅದು ಜೀವಿಸುವ ದೇವರು ಹಾಗು ಆತನ ಮಕ್ಕಳ ನಡುವಿನ ಸಂಬಂಧ ಆಗಿದೆ.
ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ದೇವರು ಕೇವಲ ಪ್ರಬಲ ಮತ್ತು ಶಕ್ತಿಯುತ ದೇವರು ಅಲ್ಲ. ಆತನು ಪ್ರೀತಿಯುಳ್ಳ ದೇವರು. ಬೈಬಲ್ ಹೇಳುತ್ತದೆ: ‘… ದೇವರು ಪ್ರೀತಿಯಾಗಿದ್ದಾನೆ ‘ (1 ಯೋಹಾನ 4: 16).
ದೇವರು ಪ್ರೀತಿಸುತ್ತಿದ್ದನು , ದೇವರು ಪ್ರೀತಿಸುತ್ತಾನೆ ಅಥವಾ ದೇವರು ಪ್ರೀತಿಸುವನು ಎಂದು ಹೇಳುವುದಿಲ್ಲ,ಆದರೆ ‘ದೇವರು ಪ್ರೀತಿಯಾಗಿದ್ದಾನೆ’ ಎಂದು ಹೇಳುತ್ತದೆ. ಇದು ಬಹಳ ಗಮನಾರ್ಹ ಹೇಳಿಕೆಯಲ್ಲವೇ?
ಇಡೀ ಬ್ರಹ್ಮಾಂಡದ ದೇವರು, ನಿನ್ನನ್ನು ಮತ್ತು ನನ್ನನ್ನು ಸೃಷ್ಟಿಸಿದ ದೇವರು, ಆ ದೇವರು ಪ್ರೀತಿಯಾಗಿದ್ದಾನೆ. ಆತನು ನಮ್ಮನ್ನು ಶಾಶ್ವತ ಪ್ರೀತಿಯಿಂದ ಪ್ರೀತಿಸುತ್ತಾನೆ. ನಾವು ಅವನೊಂದಿಗೆ ಪ್ರೀತಿಯ ಸಂಬಂಧದಲ್ಲಿರಬೇಕೆಂದು ಅವನು ಬಯಸುತ್ತಾನೆ. ಯಾವುದೇ ಇಹ ಲೋಕದ ಸಂಬಂಧದಂತೆಯೇ ಮುಕ್ತ ಸಂಪರ್ಕದ ಸಂಬಂಧ – ನಾವು ಮಾತನಾಡುವಾಗ ಆತನು ಕೇಳುತ್ತಾನೆ ಮತ್ತು ಆತನು ಮಾತನಾಡುವಾಗ ನಾವು ಕೇಳಿಸಿಕೊಳ್ಳುತ್ತೇವೆ.
ಆದರೆ ದೇವರು ಮತ್ತು ಆತನ ಮಕ್ಕಳ ನಡುವಿನ ಈ ಜೀವಂತ ಸಂಬಂಧದಲ್ಲಿ ಒಂದು ಅಥ್ಯಧ್ಭುತ ಗುಣಲಕ್ಷಣವಿದೆ: ಅದೇನೆಂದರೆ ಆತನು ಯಾವಾಗಲೂ ನಿಮಗಾಗಿ ಇರುವನು.
ಬೈಬಲ್ ಹೇಳುತ್ತದೆ : “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.” (ಇಬ್ರಿಯ 13:5)
ಇದು ದೇವರ ಶಾಶ್ವತ ಪ್ರೀತಿ. ಇಹ ಲೋಕದ ಸಂಬಂಧಗಳಲ್ಲಿ, ಜನರು ನಮ್ಮೊಂದಿಗೆ ಇದ್ದಾರೆ ಎಂದು ನೆನಸಿದರೂ, ಅನೇಕ ಸಲ ಅವರು ನಮ್ಮನ್ನು ತೊರೆಯುತ್ತಾರೆ, ಆದರೆ ನಮ್ಮ ಸ್ವರ್ಗೀಯ ತಂದೆಯು ಏನೇ ಆಗಲಿ, ನಮ್ಮೊಟ್ಟಿಗೆ ಇರುವುದಾಗಿ ಹೇಳುತ್ತಾನೆ. ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ, ನಮಗೆ ಮಾರ್ಗದರ್ಶನ ನೀಡುತ್ತಾನೆ, ನಮ್ಮನ್ನು ರಕ್ಷಿಸುತ್ತಾನೆ.
ಈ ಪ್ರೀತಿಪೂರ್ಣ ದೇವರೊಂದಿಗೆ ಪ್ರೀತಿಯ ಸಂಬಂಧದಲ್ಲಿರಲು, ನೀವು ಅವನನ್ನು ನಿಮ್ಮ ವೈಯಕ್ತಿಕ ಪ್ರಭು ಮತ್ತು ರಕ್ಷಕನಾಗಿ ಸ್ವೀಕರಿಸಬೇಕು. ಬೈಬಲ್ ಮತ್ತೂ ಹೇಳುತ್ತದೆ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16)
ಇಹ ಲೋಕದ, ಮಾನವ ಸಂಬಂಧಗಳು ತನ್ನದೇ ಆದ ಮಿತಿಗಳೊಂದಿಗೆ ತಾತ್ಕಾಲಿಕವಾಗಿರುತ್ತವೆ. ನಮ್ಮ ಸ್ವರ್ಗೀಯ ತಂದೆಯೊಂದಿಗಿನ ಸಂಬಂಧವು ಇದಕ್ಕೆ ವಿರುದ್ಧವಾಗಿ, ಪ್ರೀತಿಯೆoಬ ಬಳ್ಳಿಯಿಂದ ಶಾಶ್ವತವಾಗಿ ಕಟ್ಟಲ್ಪಟ್ಟಿರುತ್ತದೆ.
ಇಂದಿನಿಂದ ಆತನೊಂದಿಗೆ ಈ ಪ್ರೀತಿಯ ಸಂಬಂಧದಲ್ಲಿರಲು ನೀವು ಸಿದ್ಧರಿದ್ದೀರಾ?