ಯೇಸು ಕ್ರಿಸ್ತನು ಯಾರು? ಆತನು ನಿಜವಾಗಿಯೂ ಲೋಕ ರಕ್ಷಕನೇ?

ಯೇಸು ಕ್ರಿಸ್ತನು ಯಾರು?

ಯೇಸು ಕ್ರಿಸ್ತನು ಯಾರು? ಈ ಐತಿಹಾಸಿಕ ವ್ಯಕ್ತಿ ಲೆಕ್ಕವಿಲ್ಲದಷ್ಟು ಚರ್ಚೆಗಳು ಮತ್ತು ಭಕ್ತಿಯನ್ನು ಹುಟ್ಟುಹಾಕಿದನು. “ನಜರೇತಿನ ಯೇಸು”ವು ತನ್ನನ್ನು ತಾನು ಯಾರೆಂದು ಹೇಳಿಕೊಂಡನು? ಮತ್ತು ಸತ್ಯವೇದವು ಆತನನ್ನು ಹೇಗೆ ಚಿತ್ರಿಸುತ್ತದೆ?

ಯೇಸು ಯಾರೆಂಬುದನ್ನು ವಿವಿಧ ದೃಷ್ಟಿಕೋನಗಳಿಂದ ಈ ದಿನ ಪರಿಶೀಲಿಸೋಣ. ಇವುಗಳಲ್ಲಿ ಆತನಿಂದ  ನೆರವೇರಿಸಲ್ಪಟ್ಟ ಹಳೆಯ ಒಡಂಬಡಿಕೆಯ ಪ್ರವಾದನೆಗಳು, ಆತನ ದೈವಿಕ ಮತ್ತು ಮಾನವ ಸ್ವಭಾವ, ಆತನ ಜೀವನ, ಬೋಧನೆಗಳು, ಮರಣ ಮತ್ತು ಪುನರುತ್ಥಾನ ಎಲ್ಲವು ಸೇರಿವೆ; ಹಾಗೆಯೇ ಆತನ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಎಲ್ಲರ ಸಂರಕ್ಷಕನಾಗಿ, ಪ್ರಭುವಾಗಿ ಮತ್ತು ರಾಜನಾಗಿ ನಡೆಸುವ ಕಾರ್ಯಗಳೂ ಸಹ ಒಳಗೊಂಡಿವೆ. ಕೊನೆಯಲ್ಲಿ, ನೀವು ಯೇಸುಕ್ರಿಸ್ತನ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದುವಿರಿ.

ಯೇಸು ಕ್ರಿಸ್ತನು  – ದೇವರ ಮಗನು ಮತ್ತು ವಾಗ್ಧಾನದ  ಮೆಸ್ಸೀಯನು 

ಕ್ರಿಸ್ತಶಕ ಮೊದಲ ಶತಮಾನದಲ್ಲಿ ಪ್ರಾಚೀನ ಇಸ್ರಾಯೇಲಿನಲ್ಲಿ ವಾಸಿಸುತ್ತಿದ್ದ ಯೇಸು ಕ್ರಿಸ್ತನು ನಿಜವಾದ ಮನುಷ್ಯನಾಗಿದ್ದರೂ, ಆತನು ಕೇವಲ ಬುದ್ಧಿವಂತ ನೈತಿಕ ಶಿಕ್ಷಕ ಅಥವಾ ಪ್ರಭಾವಶಾಲಿ ಗುರುವಿಗಿಂತಲೂ ಹೆಚ್ಚು ಎಂದು ಸತ್ಯವೇದವು ಕಲಿಸುತ್ತದೆ. “ಯೇಸು (ಜೀಸಸ್)” ಅಥವಾ “ಜೋಶುವಾ” ಎಂಬ ಹೆಸರು ಹೀಬ್ರೂ ಮೂಲದಿಂದ ಬಂದಿದೆ, ಇದರರ್ಥ “ಕರ್ತನು ರಕ್ಷಣೆಯಾಗಿದ್ದಾನೆ” . ನಿಜವಾದ ಅರ್ಥದಲ್ಲಿ, ಹಳೆಯ ಒಡಂಬಡಿಕೆಯ ಉದ್ದಕ್ಕೂ ವಾಗ್ದಾನ ಮಾಡಲಾದ ಬಹುನಿರೀಕ್ಷಿತ ಮೆಸ್ಸೀಯನೇ  (ಅಂದರೆ “ಅಭಿಷಿಕ್ತ”) ಯೇಸು ಎಂದು ಘೋಷಿಸಲಾಗಿದೆ, ಹಾಗೆಯೇ ಮಾನವ ರೂಪವನ್ನು ಪಡೆದ ದೇವರ ಶಾಶ್ವತ ಪುತ್ರನಾಗಿದ್ದಾನೆ.

ಹಳೆಯ ಒಡಂಬಡಿಕೆಯು ಮೆಸ್ಸೀಯನ ಜನನ, ಜೀವನ, ಸೇವೆ, ಮರಣ ಮತ್ತು ಭವಿಷ್ಯದ ಆಳ್ವಿಕೆಯ ಬಗ್ಗೆ ಅನೇಕ ನಿರ್ದಿಷ್ಟ ಪ್ರವಾದನೆಗಳ ಮೂಲಕ ಆತನ   ಬರುವಿಕೆಗೆ ಅಡಿಪಾಯವನ್ನು ಹಾಕುತ್ತದೆ.

 ಹೊಸ ಒಡಂಬಡಿಕೆಯ ಸುವಾರ್ತೆಗಳ ವೃತ್ತಾಂತಗಳು ಯೇಸು ಈ ಪ್ರವಾದನೆಗಳನ್ನು ಹೇಗೆ ಪೂರೈಸಿದನು ಎಂಬುದನ್ನು ನಿಖರವಾದ ವಿವರಗಳೊಂದಿಗೆ ಬಹಿರಂಗಪಡಿಸುತ್ತದೆ.

ಉದಾಹರಣೆಗೆ:

ಇದಕ್ಕೂ ಮಿಗಿಲಾಗಿ, ಹೊಸ ಒಡಂಬಡಿಕೆಯು ಯೇಸುವಿನ ವಿಶಿಷ್ಟ ಸ್ವಭಾವದ ಬಗ್ಗೆ,ಆತನು ದೇವರ ಮಗನಾಗಿ ಮನುಶ್ಯಾವತಾರ ಹೊಂದುವ ಮೊದಲೇ ಆದಿಯಿಂದಲೇ ಇದ್ದನು ಎಂಬುದರ ಬಗ್ಗೆ ನೇರವಾದ ಸಮರ್ಥನೆಗಳನ್ನು ಮಾಡುತ್ತದೆ( ಯೋಹಾನ 1:1-3 , ಯೋಹಾನ 8:58 , ಕೊಲೊಸ್ಸೇ 1:15-17 ) ಆತನು ತಂದೆಯಾದ ದೇವರಲ್ಲಿ ಒಂದಾಗಿದ್ದನು, ಆತನೇ ಸಂಪೂರ್ಣ ದೇವರೂ , ಹಾಗೂ ಮನುಷ್ಯರ ನಡುವೆ ವಾಸಿಸಿದ ಮನುಷ್ಯನೂ ಆಗಿದ್ದಾನೆ. ( ಯೋಹಾನ 1:14 ಯೋಹಾನ 10:30 ).

ಯೇಸುವಿನ ಮಾನವೀಯತೆ ಮತ್ತು ಮನುಷ್ಯಾವತಾರ 

ಸಂಪೂರ್ಣವಾಗಿ ದೇವರಾಗಿದ್ದರೂ, ಯೇಸು ಸಂಪೂರ್ಣ ಮಾನವನಾಗಿ ಅವತರಿಸಿ ಬಂದನು. ಯೇಸುವು ಹೆರೋದನ ಆಳ್ವಿಕೆಯಲ್ಲಿ ಯೂದಾಯದ ಬೆತ್ಲೇಹೆಮ್ ಎಂಬ ಪಟ್ಟಣದಲ್ಲಿ ಜನಿಸಿದನು. ಇತಿಹಾಸಕಾರರು ಆತನ ಜನ್ಮದ ನಿಖರವಾದ ವರ್ಷವನ್ನು ಚರ್ಚಿಸುತ್ತಾರೆ, ಆದರೆ ಇದು 6 ಮತ್ತು 4 BCE ನಡುವೆ ಸಂಭವಿಸಿದೆ ಎಂದು ಅವರು ನಂಬುತ್ತಾರೆ. ಯೇಸುವಿನ ಜನನದ ಸಮಯದಲ್ಲಿ ಆತನ ಕುಟುಂಬಕ್ಕೆ ಎಲ್ಲಿಯೂ ಸ್ಥಳ ಸಿಗದೆ, ಆತನು ದೀನನಾಗಿ ಒಂದು ಕೊಟ್ಟಿಗೆಯಲ್ಲಿ ಜನಿಸಿದನು.

ಸುವಾರ್ತೆಗಳಲ್ಲಿ ಇವುಗಳ ಪ್ರಮುಖ ವಿವರಗಳನ್ನು ನೋಡುತ್ತೇವೆ :

ಮತ್ತಾಯ 1:18 “ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ – ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯಮಾಡಿರಲಾಗಿ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಬಸುರಾಗಿದ್ದದ್ದು ತಿಳಿದುಬಂತು.”

ಯೋಹಾನ 1:14 “ಆ ವಾಕ್ಯವೆಂಬವನು ನರಾವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.”

ಕನ್ಯಾ ಮರಿಯಳು ಪವಿತ್ರತ್ಮಾನಿಂದ ಗರ್ಭಧರಿಸುವುದರ ಮೂಲಕ ಯೇಸುವು ಸಂಪೂರ್ಣ ಮಾನವನಾಗಿ ಜನಿಸಿದನು. ಇದನ್ನು ದೇವರ ಮಗನ ಅವತರಿಕೆಯ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಆತನು ತನ್ನ ಶಾಶ್ವತ, ದೈವಿಕ ವ್ಯಕ್ತಿತ್ವಕ್ಕೆ ನಿಜವಾದ ಮಾನವೀಯತೆಯನ್ನು ಸೇರಿಸಿದನು.

ದೇವರು ಮಾನವನ ಹಾಗೆ ಮಾಂಸಧಾರಿಯಾದದ್ದು ಏಕೆ ?

ಯೇಸುವಿನ ಮನುಷ್ಯವತಾರವು ಇಡೀ ಲೋಕದ ಪಾಪದ ನಿವಾರಣೆಗೆ ಅತಿ ಅವಶ್ಯವಾಗಿತ್ತು. ಯೇಸು ಮನುಷ್ಯನಾಗಿ ಹುಟ್ಟಿ, ನಮ್ಮಲ್ಲಿ ಯಾರಿಗೂ ಸಾಧ್ಯವಾಗದ ಪಾಪರಹಿತ ಜೀವನವನ್ನು ಜೀವಿಸಿದನು ಮತ್ತು ಆತನು ಎಲ್ಲಾ ಜನರ  ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ತನ್ನ ಪರಿಶುದ್ಧ ದೇಹ ಹಾಗು ರಕ್ತವನ್ನು ಕ್ರೂಜೆಯ ಮೇಲೆ ಸಮರ್ಪಿಸಿದನು. ( ಫಿಲಿಪ್ಪಿ 2:6-8 ). ಆತನು ಸ್ವತಹ ದೇವರು ಮತ್ತು ಮನುಷ್ಯನಾಗಿರುವುದರಿಂದ ಮಾತ್ರ ಆತನು ದೇವರನ್ನು ಮತ್ತು ಮಾನವ ಕುಲವನ್ನು ಮತ್ತೆ ಒಂದುಗೂಡಿಸಲು ಪರಿಪೂರ್ಣ ಬಲಿಯಾದನು.

ಸತ್ಯವೇದದಲ್ಲಿನ ಸುವಾರ್ತೆಗಳು ಯೇಸುವಿನ ನಡವಳಿಕೆಗಳು, ಭಾವನೆಗಳು, ಮಿತಿಗಳು, ಅನುಭವಗಳು, ತಂದೆಗೆ ಆತನ ಪರಿಪೂರ್ಣ ವಿಧೇಯತೆ ಮತ್ತು ಸ್ವಲ್ಪವೂ ಪಾಪವಿಲ್ಲದ ಜೀವಿತವನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ ( ಇಬ್ರಿಯ 4:15). ಮಾನವನಾದ ಆತನು ದೇವರನ್ನು ಮಾನವ ಪರಿಭಾಷೆಯಲ್ಲಿ ತಿಳಿಯುವಂತೆ ಮಾಡಿದನು. ದೇವ -ಮಾನವನಾಗಿ , ತಂದೆಯಾದ ದೇವರ ಮುಂದೆ ಮಾನವಕುಲವನ್ನು ಪ್ರತಿನಿಧಿಸಲು ಮತ್ತು ಪಾಪದಿಂದ ಬಿಡುಗಡೆಯನ್ನು ಪಡಕೊಳ್ಳಲು ಯೇಸು ಸಂಪೂರ್ಣವಾಗಿ ಸಮರ್ಥನಾಗಿದ್ದನು.

ಯೇಸುವಿನ ಬೋಧನೆಗಳು

ಆತನ ಮೂರು ವರ್ಷಗಳ ಸೇವಾ ಅವಧಿಯಲ್ಲಿ, ಯೇಸುವಿನ ಬೋಧನೆಗಳು ಮತ್ತು ಅಧ್ಭುತ ಕಾರ್ಯಗಳು ಆತನು ಮೆಸ್ಸೀಯನು ಮತ್ತು ದೇವರ ಮಗನೆಂದು  ಅನನ್ಯ ಗುರುತಿನ ಪುರಾವೆಯನ್ನು ನೀಡಿತು. ಆತನ ಅಧಿಕಾರಯುಕ್ತ ಮಾತುಗಳು ಮತ್ತು ಅಧ್ಭುತ ಕಾರ್ಯಗಳನ್ನು ಮಾಡುವ ಸಾಮರ್ಥ್ಯವು ಆತನನ್ನು ಯಾವುದೇ ವಿಶಿಷ್ಟ ರಬ್ಬಿ (ಗುರು) ಅಥವಾ ಪ್ರವಾದಿಯಿಂದ ಪ್ರತ್ಯೇಕಿಸುತ್ತದೆ. 

ಯೇಸುವಿನ ಬೋಧನೆಗಳು, ಸುವಾರ್ತೆಗಳಲ್ಲಿ ಬರೆಯಲ್ಪಟ್ಟಂತೆ, ಆಳವಾದ ಒಳನೋಟ ಮತ್ತು ಜ್ಞಾನದೊಂದಿಗೆ ವ್ಯಾಪಕವಾದ ವಿಷಯಗಳನ್ನು ಒಳಗೊಂಡಿದೆ. ಆತನು ದೇವರ ರಾಜ್ಯ, ಶಾಶ್ವತ ಜೀವಿತದ ಹಾದಿ, ದೇವರ ವಾಕ್ಯದ ನಿಜವಾದ ಅರ್ಥ ಮತ್ತು ಆಧ್ಯಾತ್ಮಿಕ ಸತ್ಯಗಳನ್ನು ತಿಳಿಸುವ ಹಲವಾರು ದೃಷ್ಟಾಂತಗಳ ಬಗ್ಗೆ ಜನರಿಗೆ ಕಲಿಸುತ್ತಾ ಬಂದನು.

ಅವರ ಕೆಲವು ಪ್ರಸಿದ್ಧ ಬೋಧನೆಗಳು:

  • ಪರ್ವತದ ಮೇಲಿನ ಪ್ರಸಂಗ (ಮತ್ತಾಯ 5-7)
  • ಪರಲೋಕ ರಾಜ್ಯದ ದೃಷ್ಟಾಂತಗಳು (ಮತ್ತಾಯ 13)
  • ಎಣ್ಣೆ ಮರಗಳ ಗುಡ್ಡದ ಮೇಲೆ ಯುಗದ ಸಮಾಪ್ತಿಯ ಕುರಿತು ಮಾಡಿದ ಸಂಭಾಷಣೆ (ಮತ್ತಾಯ 24-25)
  • ಪವಿತ್ರಾತ್ಮನ ಬಗ್ಗೆ ಮೇಲುಪ್ಪರಿಗೆಯ ಸಂಭಾಷಣೆ  (ಯೋಹಾನ 14-16)

ಯೇಸುವಿನ ಅಧ್ಭುತ ಕಾರ್ಯಗಳು 

ಯೇಸು ತನ್ನ ಬೋಧನಾ ಸೇವೆಯ ಜೊತೆಗೆ, ಲೆಕ್ಕವಿಲ್ಲದಷ್ಟು ಅದ್ಭುತಗಳನ್ನು ನಡೆಸಿದನು. ಅದು ಪ್ರಕೃತಿ, ಅನಾರೋಗ್ಯ, ದೆವ್ವಗಳು ಮತ್ತು ಮರಣದ ಮೇಲೆ ಆತನ ಅಧಿಕಾರ ಮತ್ತು ದೈವಿಕ ಶಕ್ತಿಯನ್ನು ತೋರ್ಪಡಿಸಿತು. 

  • ನೀರನ್ನು ದ್ರಾಕ್ಷಾರಸವಾಗಿ ಮಾಡಿದ್ದು  ( ಯೋಹಾನ 2:1-11 )
  • ಕೆಲವು ರೊಟ್ಟಿಗಳಿಂದ 5,000 ಕ್ಕೂ ಹೆಚ್ಚು ಜನರಿಗೆ ಆಹಾರವನ್ನು ಒದಗಿಸಿದ್ದು ( ಯೋಹಾನ 6: 5-14 )
  • ಗಲಿಲಾಯ ಸಮುದ್ರದಲ್ಲಿ ಬಿರುಗಾಳಿಯನ್ನು ಶಾಂತಗೊಳಿಸಿದ್ದು ( ಲೂಕ 8:22-25 )
  • ರೋಗಿಗಳು, ಕುರುಡರು, ಕುಂಟರು, ಕಿವುಡರು ಮತ್ತು ಕುಷ್ಠರೋಗದಿಂದ ಬಳಲುತ್ತಿರುವವರನ್ನು ಗುಣಪಡಿಸಿದ್ದು (ಮತ್ತಾಯ 8-9)
  • ಲಾಜರ ಮತ್ತು ಇತರರನ್ನು ಸತ್ತವರೊಳಗಿಂದ ಎಬ್ಬಿಸಿದ್ದು (ಯೋಹಾನ 11)

ಅಪೊಸ್ತಲನಾದ ಯೋಹಾನನು ತನ್ನ ಸುವಾರ್ತೆಯಲ್ಲಿ ತಿಳಿಸುತ್ತಾನೆ : “ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳು ಈ ಗ್ರಂಥದಲ್ಲಿ ಬರೆದಿರುವದಿಲ್ಲ. ಆದರೆ ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ. ”( ಯೋಹಾನ 20: 30-31 ).

ಯೇಸುವಿನ ಬೋಧನೆ ಮತ್ತು ಅಧ್ಬುತ ಕಾರ್ಯಗಳು ಅವನ ಅಧಿಕಾರದ ಸಾಕ್ಷಿಗಳಾಗಿದ್ದವು, ಅನೇಕ ಪ್ರತ್ಯಕ್ಷದರ್ಶಿಗಳು ಆತನನ್ನು ವಾಗ್ದಾನದ ಮೆಸ್ಸೀಯನು  ಮತ್ತು ದೇವರ ಮಗನೆಂದು ಗುರುತಿಸಿದರು. ಆತನ ಕಾರ್ಯಗಳು ಮುಂದೆ ಒಂದು ದಿನ ಆತನು ಹಿಂತಿರುಗಿ ಬರುವ ಹಾಗೂ ತನ್ನ ರಾಜ್ಯದ ಪುನಃಸ್ಥಾಪನೆ ಮತ್ತು ಎಲ್ಲವನ್ನು ಹೊಸದು ಮಾಡುವ ಸಮಯದ ಮುನ್ನೋಟವನ್ನು ಒದಗಿಸುತ್ತವೆ. 

ಯೇಸು ತಾನು ಯಾರೆಂದು ಹೇಳಿಕೊಂಡಿದ್ದಾನೆ?

ಸುವಾರ್ತೆಗಳಲ್ಲಿನ ಅನೇಕ ಭಾಗದಲ್ಲಿ, ಯೇಸು ತನ್ನ ಸ್ವಂತ ಗುರುತಿನ ಬಗ್ಗೆ ಮಾಡಿದ ಅನೇಕ ನೇರ ಹೇಳಿಕೆಗಳನ್ನು ನೋಡುತ್ತೇವೆ.  

ಯೇಸುವಿನ “ನಾನೇ ” ಹೇಳಿಕೆಗಳು

ಯೋಹಾನನ ಸುವಾರ್ತೆಯಲ್ಲಿ, ಯೇಸು ತನ್ನ ಶಾಶ್ವತ ಇರುವಿಕೆ ಮತ್ತು ತಂದೆಯಾದ ದೇವರೊಂದಿಗೆ ಏಕತೆಯನ್ನು ವಿವರಿಸಲು “ನಾನೇ” ಎಂಬ ಪ್ರಬಲವಾದ ವಾಕ್ಯವನ್ನು ಪದೇ ಪದೇ ಬಳಸಿದನು:

  • “ಯೇಸು – ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ ಅಂದನು” ( ಯೋಹಾನ 8:58 )
  • “ಜೀವಕೊಡುವ ರೊಟ್ಟಿ ನಾನೇ;” ( ಯೋಹಾನ 6:35 )
  • “ನಾನೇ ಲೋಕಕ್ಕೆ ಬೆಳಕು” ( ಯೋಹಾನ 8:12 )
  • “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ” ( ಯೋಹಾನ 11:25-26 )

ವಿಮೋಚನಕಾಂಡ 3:14 ರಲ್ಲಿ ಹೇಳಿರುವ ಮೇರೆಗೆ – “ಇರುವಾತನೇ ಆಗಿದ್ದೇನೆ ” ಎಂಬ ಮಾತಿನ ಅರ್ಥ ತಿಳಿದ ಯಹೂದಿಗಳಿಗೆ ಈ ಮಾತು ದೇವದೂಷಣೆಯ ಮಾತಿನಂತೆ ತೋರಿತು. 

ಯೇಸು ತಾನೆೇ ಬರಬೇಕಾದ ಮೆಸ್ಸೀಯನೆಂದು ಹೇಳಿದ್ದು 

ಅನೇಕ ಸಂದರ್ಭಗಳಲ್ಲಿ, ಹಳೆಯ ಒಡಂಬಡಿಕೆಯಲ್ಲಿ ಭರವಸೆ ನೀಡಲಾದ ಬಹು ನಿರೀಕ್ಷಿತ ಮೆಸ್ಸೀಯನು ತಾನು ಎಂದು ಯೇಸು ದೃಢಪಡಿಸಿದನು:

“ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಆ ಮೆಸ್ಸೀಯನು ಎಂದು ಹೇಳಿದನು.” ( ಯೋಹಾನ 4:25-26 ) – “ಆ ಹೆಂಗಸು ಆತನಿಗೆ – ಮೆಸ್ಸೀಯನು ಅಂದರೆ ಕ್ರಿಸ್ತನು ಬರುತ್ತಾನೆಂದು ಬಲ್ಲೆನು; ಆತನು ಬಂದ ಮೇಲೆ ನಮಗೆ ಎಲ್ಲಾ ತಿಳಿಸುವನು ಎಂದು ಹೇಳಲು ಯೇಸು ಆಕೆಗೆ – ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಆ ಮೆಸ್ಸೀಯನು ಎಂದು ಹೇಳಿದನು”.

“ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು” ( ಮತ್ತಾಯ 16:16 ರಲ್ಲಿ ಇದನ್ನು ಯೇಸು ದೃಢಪಡಿಸಿದನು)

ದೇವರೊಂದಿಗೆ ಸಮಾನತೆ

ಯೇಸು ತಂದೆಯಾದ ದೇವರೊಂದಿಗೆ ಸಮಾನತೆಯನ್ನು ಪ್ರತಿಪಾದಿಸಿದನು, ತನ್ನನ್ನು ನಿಜವಾದ ದೇವರಿಗೆ ಸಮಾನನಾಗಿಸಿಕೊಂಡನು:

  • “ನಾನೂ ತಂದೆಯೂ ಒಂದಾಗಿದ್ದೇವೆ” ( ಯೋಹಾನ 10:30 )
  • “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ” ( ಯೋಹಾನ 14:9)
  • “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ( ಮತ್ತಾಯ 28:18 )

ಧಾರ್ಮಿಕ ಮುಖಂಡರು ಈ ಹೇಳಿಕೆಗಳಿಂದ ಆಕ್ರೋಶಗೊಂಡರು ಮತ್ತು ಅವರ ಕಾನೂನಿನ ಪ್ರಕಾರ ಮರಣದಂಡನೆಗೆ ಅರ್ಹವಾಗುವ ದೇವನಿಂದನೆ ಅದಾಗಿತ್ತು . ದೇವರ ಅವತಾರ ಎಂದು ಯೇಸು ತನ್ನ ಬಗ್ಗೆ ಘೋಷಿಸಿದ ಸತ್ಯವನ್ನು ಸ್ವೀಕರಿಸಲು ಅನೇಕರು ನಿರಾಕರಿಸಿದರು.

ಆದರೂ, ಯೇಸು ಅನೇಕ ಅದ್ಭುತಗಳನ್ನು ಮಾಡಿದನು ಮತ್ತು ತನ್ನನ್ನು ನಿಜವಾಗಿಯೂ ಮೆಸ್ಸೀಯನು ಮತ್ತು ದೇವರ ಮಗನೆಂದು ನಂಬಿದವರಿಗೆ ಸಾಬೀತುಪಡಿಸಲು ಪುರಾವೆಗಳನ್ನು ಒದಗಿಸಿದನು. ಯೇಸುವು ಒಡೆಯನು, ಅಭಿಷಿಕ್ತನು ಮತ್ತು ಮಾನವ ರೂಪದಲ್ಲಿ ದೇವರ ಶಾಶ್ವತ ಪುತ್ರ ಎಂಬ ಈ ನಂಬಿಕೆಯು ನಿಜವಾದ ಕ್ರಿಸ್ತೀಯ ನಂಬಿಕೆಯ ಮೂಲವಾಗಿದೆ.

ಯೇಸುವಿನ ಪ್ರಾಯಶ್ಚಿತ್ತ ಮರಣ ಮತ್ತು ಪುನರುತ್ಥಾನ

ಯೇಸುವು ಮೆಸ್ಸೀಯನು ಮತ್ತು ದೇವರ ಮಗನು ಎಂಬ ಸತ್ಯವನ್ನು ಭದ್ರಪಡಿಸಿದ ಪ್ರಮುಖ ಘಟನೆಗಳು ಶಿಲುಬೆಯ ಮೇಲಿನ ಆತನ ಪ್ರಾಯಶ್ಚಿತ್ತ ಮರಣ ಮತ್ತು ನಂತರ ದೈಹಿಕ ಪುನರುತ್ಥಾನವಾಗಿತ್ತು. ಈ ಎರಡು ಐತಿಹಾಸಿಕ ಸತ್ಯಗಳು ಕ್ರೈಸ್ತ ಧರ್ಮಶಾಸ್ತ್ರದ ಹೃದಯಭಾಗದಲ್ಲಿವೆ.

ಕ್ರೂಜೆಯ ಮೇಲೆ ಮರಣ 

ಕ್ರೂರ ಮರಣವನ್ನು ತಪ್ಪಿಸಲು ಯೇಸು ತನ್ನ ದೈವಿಕ ಶಕ್ತಿಯನ್ನು ಬಳಸಬಹುದಾಗಿತ್ತಾದರೂ, ದೇವರ ವಿಮೋಚನೆಯ ಯೋಜನೆಯನ್ನು ಪೂರೈಸಲು ಶಿಲುಬೆಯ ಮೇಲಿನ ಆತನ ಮರಣವು ಸಂಪೂರ್ಣವಾಗಿ ಅಗತ್ಯವಾಗಿತ್ತೆಂದು ಧರ್ಮಶಾಸ್ತ್ರವು ಕಲಿಸುತ್ತದೆ. ಪರಿಪೂರ್ಣ ವಿಧೇಯತೆಯಲ್ಲಿ ಪಾಪರಹಿತ ದೇವರ ಮಗನಾಗಿ, ಯೇಸು ತನ್ನ ಪ್ರಾಣವನ್ನು ಪಾಪಕ್ಕೆ ಅಂತಿಮ ಪ್ರಾಯಶ್ಚಿತ್ತವಾಗಿ ಕೊಟ್ಟನು:

ಮಾರ್ಕ 10:45 “ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.”

2 ಕೊರಿಂಥ 5:21 “ನಾವು ಆತನಲ್ಲಿ ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಪಾಪಜ್ಞಾನವಿಲ್ಲದ ಆತನನ್ನು ನಮಗೋಸ್ಕರ ಪಾಪ ಸ್ವರೂಪಿಯಾಗ ಮಾಡಿದನು.” 

ಸತ್ಯವೇದದ ಪ್ರಕಾರ, ಯೇಸುವಿನ ಮರಣವು ಪಾಪದ ದೆಸೆಯಿಂದ ಮನುಷ್ಯನ ಮೇಲೆ ಇದ್ದ ದೇವರ ಕ್ರೋಧವನ್ನು ಸಂಪೂರ್ಣವಾಗಿ ನಿವಾರಣೆ ಮಾಡಿತು ಮತ್ತು ಶಿಲುಬೆಯ ಮೇಲೆ ಕ್ರಿಸ್ತನು ಮುಗಿಸಿ ತೀರಿಸಿದ ಕಾರ್ಯದ ಮೇಲೆ ನಂಬಿಕೆ ಇಡುವವರಿಗೆ ಕ್ಷಮೆ ಮತ್ತು ಪರಲೋಕ ರಾಜ್ಯಕ್ಕೆ ಬಾಧ್ಯರಾಗುವ ಆಧಾರವನ್ನು ಸ್ಥಾಪಿಸಲಾಯಿತು.

ಪುನರುತ್ಥಾನ

 ಲೋಕದ ಪಾಪಕ್ಕೆ ಪ್ರಾಯಶ್ಚಿತ್ತವಾದ ಯೇಸುವಿನ ಮರಣವು  ಎಷ್ಟು ಪ್ರಾಮುಖ್ಯವೋ ಅಷ್ಟೇ ಮುಖ್ಯ ಆತನ ಮೂರು ದಿನಗಳ ನಂತರ ಹೊಂದಿದ ದೈಹಿಕ ಪುನರುತ್ಥಾನ. ಯೇಸು ಸತ್ತವರೊಳಗಿಂದ ಎದ್ದು ಬಾರದಿದ್ದರೆ, ಆತನ ಮರಣವು ಏನನ್ನೂ ಸಾಧಿಸುತ್ತಿರಲಿಲ್ಲ. ಆದರೆ ಸತ್ಯವೇದದ ಸುವಾರ್ತೆಗಳು ಹಲವಾರು ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ದಾಖಲಿಸುತ್ತವೆ, ಯೇಸುವು ನಿಜವಾಗಿ ದೈಹಿಕವಾಗಿ ಪುನರುತ್ಥಾನ ಹೊಂದಿ ಜೀವಿತನಾಗಿ ಎದ್ದದ್ದನ್ನು ತಿಳಿಸುತ್ತವೆ. 

ಅಪೊಸ್ತಲನಾದ ಪೌಲನು ಸತ್ಯವೇದದಲ್ಲಿ ಪುನರುತ್ಥಾನದ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾನೆ :

1 ಕೊರಿಂಥ 15:17-20 “ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಿಮ್ಮ ನಂಬಿಕೆಯು ನಿಷ್ಪ್ರಯೋಜನವಾಗಿದೆ, ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ. ಇದು ಮಾತ್ರವಲ್ಲದೆ ಕ್ರಿಸ್ತನವರಾಗಿ ನಿದ್ರೆಹೋದವರು ನಾಶವಾದರು. ಈ ಜೀವಮಾನಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡದ್ದೇ ಹೊರತು ಮತ್ತೇನೂ ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ. ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದೇ ಇದ್ದಾನೆ; ನಿದ್ರೆಹೋದವರಲ್ಲಿ ಪ್ರಥಮಫಲವಾದನು.”

ಪುನರುತ್ಥಾನವು ಯೇಸುವು ದೇವರ ಮಗನೆಂದು ಮೌಲ್ಯೀಕರಿಸಿತು ಮತ್ತು ಪಾಪ ಮತ್ತು ಮರಣವನ್ನು ಶಾಶ್ವತವಾಗಿ ಜಯಿಸಲು ಆತನ ತ್ಯಾಗವನ್ನು ದೇವರು ಸ್ವೀಕರಿಸಿದನು ಎಂದು ಸಾಬೀತುಪಡಿಸಿತು. ಆತನಲ್ಲಿ ನಂಬಿಕೆ ಇಡುವವರಿಗೆ ಕೊಡಲಾಗುವ ನಿತ್ಯಜೀವದ ವಾಗ್ದಾನಕ್ಕೂ ಇದು ಆಧಾರವಾಗಿದೆ. ಪುನರುತ್ಥಾನ ಹೊಂದಿದ ಕರ್ತನಾಗಿ, ಯೇಸು ಮತ್ತೆ ಹಿಂದಿರುಗಿ ಬರುವಾಗ ತನಗೆ ಸೇರಿದ ಎಲ್ಲರ ಭವಿಷ್ಯದ ಪುನರುತ್ಥಾನವನ್ನು ಖಾತರಿಪಡಿಸುತ್ತಾನೆ.

ಪುನರುತ್ಥಾನಕ್ಕೆ ಯಾವ ಪುರಾವೆಗಳಿವೆ?

ಸತ್ಯವೇದದಲ್ಲಿ ಯೇಸುವಿನ ದೈಹಿಕ ಪುನರುತ್ಥಾನಕ್ಕೆ ಅಗಾಧವಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ, ಆದಾಗ್ಯೂ  ಈ ಘಟನೆಗೆ ಪುರಾವೆಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಹೊಸ ಒಡಂಬಡಿಕೆಯಲ್ಲಿನ ಸುವಾರ್ತೆ ಲೇಖಕರು ಮತ್ತು ಅಪೊಸ್ತಲರು ಯೇಸುವು  ಸತ್ತವರೊಳಗಿಂದ ದೇಹ ಸಹಿತವಾಗಿ ಎದ್ದನು ಎಂಬ ವಾಸ್ತವದ ಮೇಲೆ ತಮ್ಮ ಎಲ್ಲವನ್ನೂ ಪಣಕ್ಕಿಟ್ಟರು. ಈ ವಿಷಯವನ್ನು ಬೆಂಬಲಿಸುವ ಹಲವಾರು ಪ್ರಮುಖ ಸಂಗತಿಗಳು ಮತ್ತು ಸಂದರ್ಭಗಳಿವೆ:

ಖಾಲಿಯಾದ ಸಮಾಧಿ

ಎಲ್ಲಾ ನಾಲ್ಕು ಸುವಾರ್ತೆಗಳು ದಾಖಲಿಸಿರುವ ಪ್ರಕಾರ, ಯೇಸುವಿನ ಅನುಯಾಯಿಗಳಾದ ಸ್ತ್ರೀಯರು  ಆ ಭಾನುವಾರದ ಮುಂಜಾನೆ ಆತನ ಸಮಾಧಿಯ ಬಳಿಗೆ ಹೋದಾಗ, ಆತನಿಗೆ ಸುತ್ತಿದ್ದ ಬಟ್ಟೆಗಳನ್ನು ಹೊರತುಪಡಿಸಿ ಅದು ಖಾಲಿಯಾಗಿತ್ತು. ಇದು ಕ್ರೈಸ್ತ ಧರ್ಮವಲ್ಲದ ಬೇರೆ  ಮೂಲಗಳಲ್ಲಿ ಸಹ ವರದಿಯಾಗಿದೆ. ಸಮಾಧಿ ಖಾಲಿಯಾಗಬೇಕಾದರೆ, ಯೇಸುವಿನ ದೇಹವು ಅದರ ಸಮಾಧಿಯ ನಂತರ ಎಲ್ಲಿಗೆ ಹೋಯಿತು ಎಂಬುದನ್ನು ನಿಜವಾದ ಐತಿಹಾಸಿಕ ಘಟನೆ ವಿವರಿಸಬೇಕಾಗಿತ್ತು.

ಬದಲಾವಣೆ ಹೊಂದಿದ ಶಿಷ್ಯರು

ಯೇಸುವಿನ ಶಿಲುಬೆಗೇರಿಸುವಿಕೆಯ ಮೊದಲು, ಆತನ ಶಿಷ್ಯರು ಭಯ, ನಿರಾಕರಣೆ ಮತ್ತು ಹತಾಶೆಯಿಂದ ಓಡಿಹೋದರು. ಕೆಲವೇ ವಾರಗಳ ನಂತರ, ಇದೇ ಗುಂಪು ನಂಬಲಾಗದ ರೂಪಾಂತರಕ್ಕೆ ಒಳಗಾಯಿತು ಮತ್ತು ಪುನರುತ್ಥಾನ ಹೊಂದಿದ  ಕ್ರಿಸ್ತನನ್ನು ಕೊಂದ ನಗರದಲ್ಲೇ  ಧೈರ್ಯದಿಂದ ಆತನ ಸುವಾರ್ತೆಯನ್ನು ಘೋಷಿಸಿದರು. ನಂಬದವರು, ಪುನರುತ್ಥಾನ ಹೊಂದಿದ ಯೇಸುವನ್ನು ಪ್ರಚುರ ಪಡಿಸುವ ಶಿಷ್ಯರ ಈ ರೂಪಾಂತರ ಹಾಗೂ ಸಂಪೂರ್ಣ ಬದಲಾವಣೆಗೆ ಕಾರಣವನ್ನು ವಿವರಿಸಲಾರದೆ ಹೋದರು.

ಪ್ರತ್ಯಕ್ಷದರ್ಶಿ  ಸಾಕ್ಷಿಗಳು

 40 ದಿನಗಳವರೆಗೆ ಪುನರುತ್ಥಾನಗೊಂಡ ಯೇಸುವಿನೊಂದಿಗೆ ಒಡನಾಟ ನಡೆಸಿದ ಅನೇಕ ಪ್ರತ್ಯಕ್ಷದರ್ಶಿ ಸಾಕ್ಷ್ಯಗಳನ್ನು ಹೊಸ ಒಡಂಬಡಿಕೆಯು ಒದಗಿಸುತ್ತದೆ. ಇವುಗಳಲ್ಲಿ ಅಪೊಸ್ತಲರು ( ಅ. ಕೃತ್ಯ 1:3 ), 500 ಕ್ಕಿಂತ ಹೆಚ್ಚು ಜನರು ( 1 ಕೊರಿಂಥ 15:6 ), ಯೇಸುವಿನ ಸ್ವಂತ ಸಹೋದರರು ( 1 ಕೊರಿಂಥ 15:7 ) ಮತ್ತು ಅಂತಿಮವಾಗಿ ಸ್ವತಃ ಪೌಲನು ( ಅ. ಕೃತ್ಯ 9) ಸಹ ಸೇರಿದ್ದಾರೆ.

ಈ ಪ್ರತ್ಯಕ್ಷದರ್ಶಿಗಳು ಯೇಸುವಿನ ಪುನರುತ್ಥಾನದ ಬಗ್ಗೆ ಅನೇಕರಿಗೆ ತಿಳಿಸಲು ಮತ್ತು ಆತನಿಗಾಗಿ ಜೀವಿಸಲು ಮತ್ತು ಸಾಯಲು ಸಹ ಸಿದ್ಧರಿದ್ದರು. ತಮ್ಮ ಜೀವನದ ಹಂಗನ್ನು ತೊರೆದು ಯೇಸುವಿನ ವಿಷಯವಾದ ಸುವಾರ್ತೆಯನ್ನು ಸಾರಲು ತಮ್ಮ ಜೀವಿತಗಳನ್ನೇ ಕೊಟ್ಟರು. 

ಸಭೆಯ ಹೊರಹೊಮ್ಮುವಿಕೆ

ಯೇಸುವನ್ನು ಶಿಲುಬೆಗೇರಿಸಿದ ಕೆಲವೇ ವಾರಗಳಲ್ಲಿ, ಆತನ ಪುನರುತ್ಥಾನದಲ್ಲಿ ವಿಶ್ವಾಸವಿಟ್ಟ ಸಭೆಯು ವೇಗವಾಗಿ ಬೆಳೆಯಿತು, ಸಾವಿರಾರು ಜನರು ಯೆಹೂದ್ಯ ಮತವನ್ನು ತೊರೆದು ಕ್ರಿಸ್ತನನ್ನು ಅನುಸರಿಸಿದರು. ಸಭೆಯ ಸ್ಥಾಪಕರು  ತಾವು ಪುನರುತ್ಥಾನಗೊಂಡ ಮೆಸ್ಸೀಯನನ್ನು ನಿಜವಾಗಿ ನೋಡಿದ್ದರಿಂದ ಮತ್ತು ಅನೇಕರಿಗೆ ತಿಳಿಸಿದ್ದರಿಂದ ಇದು ಸಾಧ್ಯವಾಯಿತು. 

ಯೇಸುವಿನ  ಪುನರುತ್ಥಾನದ  ವಿಷಯವಾಗಿ, ಅದು ಕೇವಲ ಭ್ರಮೆ ಅಥವಾ ಯಾರೋ ಆತನ ದೇಹವನ್ನು ಮುಚ್ಚಿಟ್ಟಿದ್ದಾರೆ ಅನ್ನುವಂಥ ವಿಧಧ ವಾದಗಳನ್ನು, ಸಿದ್ಧಾಂತಗಳನ್ನು ಹರಡಲಾಯಿತು.  ಆದರೆ ಈ ವಾದಗಳು ಯೇಸುವಿನ ದೈಹಿಕ ಪುನರುತ್ಥಾನವನ್ನು ಸೂಚಿಸುವ ‘ಖಾಲಿಯಾದ  ಸಮಾಧಿ’ ಮತ್ತು ನಂತರದ ಅತ್ಯಂತ ಬಲವಾದ ಮತ್ತು ಸುಸಂಬದ್ಧ ಸಮಗ್ರ ಐತಿಹಾಸಿಕ ಪುರಾವೆಗಳು  ಮತ್ತು ಆತನು ಪುನರುತ್ಥಾನದ ನಂತರ  ತನ್ನನ್ನು ಅನೇಕರಿಗೆ ತೋರ್ಪಡಿಸಿಕೊಂಡದ್ದನ್ನು ವಿವರಿಸಲಾರವು. 

ಯೇಸು ಕ್ರಿಸ್ತನು  – ರಕ್ಷಕನು ಮತ್ತು ಒಡೆಯನು 

ಯೇಸುವಿನ ಕುರಿತಾದ ಸತ್ಯವೇದದ ಸತ್ಯಗಳ ಆಧಾರದ ಮೇಲೆ, ಆತನ ಮರಣ ಮತ್ತು ಪುನರುತ್ಥಾನವು ಕೇವಲ ಐತಿಹಾಸಿಕ ಘಟನೆಯನ್ನು ಪ್ರತಿನಿಧಿಸುವುದಿಲ್ಲ, ಆದರೆ ಎಲ್ಲಾ ಕ್ರೈಸ್ತ ಸಿದ್ಧಾಂತವು ನಿಂತಿರುವ ನಿರ್ಣಾಯಕ ಸತ್ಯವಾಗಿದೆ. ಯೇಸುವು ದೇವರ ಮಗನಾಗಿದ್ದು, ಇಡೀ ಲೋಕದ ಪಾಪಕ್ಕಾಗಿ ತನ್ನ ಜೀವವನ್ನು ಕೊಟ್ಟನು ಮತ್ತು ಮರಣವನ್ನು ಜಯಿಸಿದನು, ಆತನಲ್ಲಿ ನಂಬಿಕೆ ಇಡುವವರಿಗೆ ನಿತ್ಯ ಜೀವವನ್ನು ಒದಗಿಸುವ ಅಧಿಕಾರವನ್ನು ಆತನು ಮಾತ್ರ ಹೊಂದಿದ್ದಾನೆ.

ಯೋಹಾನ 3:16 “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”

ಕರ್ತನಾದ ಯೇಸು ಕ್ರಿಸ್ತನ ಕೃಪೆ ಮತ್ತು ಆತನ ಮೇಲೆ ಪೂರ್ಣ ನಂಬಿಕೆ ಇಡುವುದರಿಂದ ಯಾರಾದರೂ ತಂದೆಯಾದ ದೇವರೊಂದಿಗೆ ಸಮಾಧಾನ ಮತ್ತು  ಪಾಪಗಳ  ಕ್ಷಮೆ ಮತ್ತು ಶಾಶ್ವತ ಜೀವನದ ಉಚಿತ ಕೊಡುಗೆಯನ್ನು ಪಡೆಯಬಹುದು – ರಕ್ಷಣೆ ಹೊಂದಲು ಯೇಸುವೇ ಏಕೈಕ ಮಾರ್ಗವೆಂದು ಬೈಬಲ್ ಸ್ಪಷ್ಟಪಡಿಸುತ್ತದೆ ( ಅ. ಕೃತ್ಯ 4:12 , ಯೋಹಾನ 14:6 ).

ಆದಾಗ್ಯೂ, ಒಬ್ಬನು ತನ್ನ ಆತ್ಮ ರಕ್ಷಣೆಗಾಗಿ ಯೇಸುವಿನಲ್ಲಿ ನಂಬಿಕೆಯನ್ನು ಇಟ್ಟ ಮೇಲೆ, ತನ್ನ ಜೀವಿತದಲ್ಲಿಯೂ ಸಹ ಯೇಸುವನ್ನು ಪ್ರಭುವಾಗಿ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆತನ ಅಧಿಕಾರಕ್ಕೆ ಸಂಪೂರ್ಣವಾಗಿ ಒಪ್ಪಿಸಿಕೊಡಬೇಕು.

ಲೂಕ 6:46 “ಇದಲ್ಲದೆ ನೀವು ನನ್ನನ್ನು ಸ್ವಾಮೀ ಸ್ವಾಮೀ ಅಂತ ಕರೆದು ನಾನು ಹೇಳುವದನ್ನು ನಡಿಸದೆ ಇರುವದೇಕೆ?”

ಕ್ರಿಸ್ತನ ಮೇಲಿನ ನಂಬಿಕೆಯಿಂದ ಹೊಸದಾಗಿ ಹುಟ್ಟಿದವರು, ದೇವರೊಂದಿಗೆ ರಾಜಿ ಮಾಡಿಕೊಂಡವರು, ದೇವರ ಚಿತ್ತಕ್ಕೆ ಪೂರ್ಣ ವಿಧೇಯರಾಗಿ,  ದೇವರನ್ನು ಮತ್ತು ಇತರರನ್ನು ಪ್ರೀತಿಸುವ ಮೂಲಕ  ಆತನು ರೂಪಿಸಿದ ಜೀವನವನ್ನು ಸಂಪೂರ್ಣವಾಗಿ ಸ್ವೀಕರಿಸಲು ಅವಕಾಶ ಉಂಟು. ಯೇಸುವು ಕೇವಲ ರಕ್ಷಕ ಅಲ್ಲ ಆದರೆ ಎಲ್ಲಾದರ ಮೇಲೆ ಪ್ರಭುವು ಆಗಿದ್ದಾನೆ. 

ಶೀಘ್ರದಲ್ಲೇ ಬರಲಿರುವ ರಾಜ

ಅಂತಿಮವಾಗಿ, ಯೇಸುವು ಒಂದು ದಿನ ತನ್ನ ಶಾಶ್ವತ ರಾಜ್ಯವನ್ನು ಪೂರ್ಣಗೊಳಿಸಲು ಮತ್ತು ಎಲ್ಲಾ ಸೃಷ್ಟಿಯ ಮೇಲೆ ರಾಜನಾಗಿ ಆಳ್ವಿಕೆ ನಡೆಸಲು ಬರಲಿಕ್ಕಿದಾನೆ ಎಂದು ತಿಳಿಸುತ್ತಾನೆ.

ಮತ್ತಾಯ 25: 31-32 “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು..  “

ಹೊಸ ಒಡಂಬಡಿಕೆಯು ಯೇಸುವಿನ ಎರಡನೇ ಬರೋಣ ಮತ್ತು ಆತನು ಪರಲೋಕದಲ್ಲಿವಂತೆ ಭೂಲೋಕದಲ್ಲಿಯೂ ತನ್ನ ರಾಜ್ಯ ಸ್ಥಾಪಿಸುವುದರ ಕುರಿತಾದ ಅನೇಕ ಪ್ರವಾದನೆಗಳಿಂದ ತುಂಬಿದೆ.  ಆ ಸಮಯದಲ್ಲಿ, ಅವನು ಎಲ್ಲಾ ತಪ್ಪುಗಳನ್ನು ಸರಿಪಡಿಸುತ್ತಾನೆ, ಒಂದೇ ಸಾರಿ ಪಾಪವನ್ನು ನಿವೃತ್ತಿ ಮಾಡುತ್ತಾನೆ, ಎಲ್ಲಾ ಸೃಷ್ಟಿಯನ್ನು ನವೀಕರಿಸುತ್ತಾನೆ, ಪರಿಪೂರ್ಣ ನೀತಿ ಮತ್ತು ಶಾಂತಿಯಿಂದ ಆಳುತ್ತಾನೆ ಮತ್ತು ರಾಜರ ರಾಜನು ಮತ್ತು ಪ್ರಭುಗಳ ಪ್ರಭುವಾಗಿ ಶಾಶ್ವತವಾಗಿ ಆಳುತ್ತಾನೆ.

ಯೇಸುವಿನ ಆರಂಭದ ಹಿಂಬಾಲಕರ ನಂಬಿಕೆ ಏನಾಗಿತ್ತು ?

ಕ್ರೈಸ್ತ ಧರ್ಮದ ಪ್ರಕಾರ ಯೇಸುವನ್ನು ಅರ್ಥಮಾಡಿಕೊಳ್ಳಲು, ಆತನ ಪುನರುತ್ಥಾನದ ನಂತರ ಆರಂಭಿಕ ಹಿಂಬಾಲಕರು ಆತನ ಬಗ್ಗೆ ಏನನ್ನು ತಿಳಿದಿದ್ದರು ಮತ್ತು ಇತರರಿಗೆ ಏನನ್ನು ತಿಳಿಸಿದರು ಎಂಬುದನ್ನು ತಿಳಿಯುವುದು ಅವಶ್ಯ. 

ಹೊಸ ಒಡಂಬಡಿಕೆಯಲ್ಲಿನ ಅಪೋಸ್ತಲರ ಕೃತ್ಯಗಳು ಮತ್ತು ಪತ್ರಿಕೆಗಳು ಯೇಸುವಿನ ಕುರಿತಾದ ಸಿದ್ಧಾಂತಕ್ಕೆ ಒಂದು ಕಿಟಕಿಯಂತಿದೆ. 

ಅ. ಕೃತ್ಯಗಳಲ್ಲಿ, ಪೌಲನ ಪಂಚಾಶತ್ತಮ ದಿನದ ಧರ್ಮೋಪದೇಶವು ಯೇಸುವೇ ವಾಗ್ದಾನ ಮಾಡಲಾದ ಮೆಸ್ಸೀಯನು (ಕ್ರಿಸ್ತನು /ಅಭಿಷಿಕ್ತನು ) ಮತ್ತು ದೇವರು – ಸತ್ತವರೊಳಗಿಂದ ಎಬ್ಬಿಸಲ್ಪಟ್ಟ ಮತ್ತು ದೇವರ ಬಲಗಡೆಗೆ ಏರಿಸಲ್ಪಟ್ಟ ದೇವರ ಮಗ ಎಂದು ಧೈರ್ಯದಿಂದ ಘೋಷಿಸಿತು. ( ಅ. ಕೃತ್ಯ 2:22-36

ಪೌಲನ ಪತ್ರಿಕೆಗಳು ಯೇಸುವನ್ನು ಮಾಂಸಧಾರಿಯಾದ ದೇವರ ಶಾಶ್ವತ ಮಗನೆಂದು ವಿವರಿಸುತ್ತವೆ, ಅದೃಶ್ಯ ದೇವರ ಗೋಚರ ಚಿತ್ರಣ, ಎಲ್ಲದರ ಸೃಷ್ಟಿಕರ್ತ ಮತ್ತು ಪಾಲಕ ( ಕೊಲೊಸ್ಸೆ 1:15-20 , ಫಿಲಿಪ್ಪಿ 2:5-11 ). ಆತನ ಶಾಶ್ವತ ಪ್ರಭುತ್ವದಿಂದಾಗಿ ಆತನು ಎಲ್ಲಾ ಗೌರವ, ಮಾನ ಮತ್ತು ಮಹಿಮೆಗೆ ಅರ್ಹನಾಗಿದ್ದಾನೆ.

ಯೋಹಾನನ ಸುವಾರ್ತೆ ಮತ್ತು ಪತ್ರಿಕೆಗಳು ಯೇಸುವನ್ನು ಆದಿಯಿಂದ ದೇವರಬಳಿಯಲ್ಲಿದಂಥ ವಾಕ್ಯ/ಲೋಗೋಸ್ ಎಂದು ಒತ್ತಿಹೇಳುತ್ತದೆ, ಆತನು ಮೊದಲಿನಿಂದಲೂ ದೇವರೊಂದಿಗೆ ಇದ್ದವನು, ಸಂಪೂರ್ಣ ದೇವರಾಗಿದ್ದರೂ ಸಹ ಸಂಪೂರ್ಣವಾಗಿ ಮನುಷ್ಯನಾದನು( ಯೋಹಾನ 1:1-18 , 1 ಯೋಹಾನ 4:2-3 ). ಯೋಹಾನನು ಮತ್ತು ಇತರ ಅಪೊಸ್ತಲರು ಕ್ರಿಸ್ತನ ಮನುಷ್ಯವತಾರ ಮತ್ತು  ದೈವತ್ವವನ್ನು ಯಾವುದೇ ಸಂದೇಹವಿಲ್ಲದೆ ಬೋಧಿಸಿದರು. 

ಯೇಸುವಿನ ಆರಂಭಿಕ ಯಹೂದಿ ಅನುಯಾಯಿಗಳು ತಮ್ಮ ಏಕದೇವತಾವಾದದ ನಂಬಿಕೆಗಳ ಹೊರತಾಗಿಯೂ, ಇಸ್ರಾಯೇಲ್ಯರ ದೇವರಿಗೆ ಸಮಾನನಾಗಿ ಆತನನ್ನು ಆರಾಧಿಸಿದರು ಎಂಬುದು ಗಮನಾರ್ಹವಾಗಿದೆ. ಯೇಸುವು ಮೆಸ್ಸೀಯನು ಮತ್ತು ದೇವರ ಮಗನು ಎಂದು ಅವರು ಬಲವಾದ ಪುರಾವೆಗಳಿಂದ ಮನವರಿಕೆ ಮಾಡಿಕೊಂಡಿದ್ದರು.

ಯೇಸು ಕ್ರಿಸ್ತನು ಯಾರು ? ಆತನನ್ನು ಅರಿಯುವುದು ನಿಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಬಲ್ಲದು

ಯೇಸು ಕ್ರಿಸ್ತನು ಯಾರು ? ಆತನ ಶಿಷ್ಯರಿಗೆ, ಯೇಸು ದೇವರ ಶಾಶ್ವತ ಪುತ್ರ. ತನ್ನನ್ನು ದೇವಾ ಕುಮಾರ ಮತ್ತು ರಕ್ಷಕ ಎಂದು ನಂಬುವವರನ್ನು ರಕ್ಷಿಸಲು ಅವನು ದೇವ-ಮಾನವನಾದನು . ಯೇಸು ವಾಗ್ದತ್ತ ಮೆಸ್ಸೀಯನಾಗಿ ಪ್ರವಾದನೆಗಳನ್ನು ಪೂರೈಸಿದನು. ಅವನು ಪಾಪದ ನಿವಾರಣೆಗಾಗಿ ಪಾಪರಹಿತ ಕುರಿಮರಿಯಾಗಿ ಮರಣಹೊಂದಿದನು ಮತ್ತು ಅವನ ಶಾಶ್ವತ ರಾಜ್ಯವನ್ನು ಸ್ಥಾಪಿಸಲು ಪುನರುತ್ಥಾನ ಹೊಂದಿದ ರಾಜನಾಗಿ ಹಿಂತಿರುಗುತ್ತಾನೆ.

ಯೇಸುವು ಸಂಪೂರ್ಣವಾಗಿ ದೇವರು ಮತ್ತು ಸಂಪೂರ್ಣವಾಗಿ ಮನುಷ್ಯ. ಆತನು ನಮ್ಮೊಂದಿಗೆ ವಾಸಿಸಿದನು, ಜ್ಞಾನ ತಿಳುವಳಿಕೆಗಳನ್ನು ಕಲಿಸಿದನು, ಅದ್ಭುತಗಳನ್ನು ಮಾಡಿದನು ಮತ್ತು ಸತ್ಯವೇದದ ಪ್ರಕಾರ ಸತ್ತು, ಮೂರನೆಯ ದಿನದಲ್ಲಿ ಮತ್ತೆ ಎದ್ದು ಬಂದನು. ಈ ಘಟನೆಗಳು ಕ್ರೈಸ್ತ ನಂಬಿಕೆಯ ಅಡಿಪಾಯವಾಗಿದೆ.

ಆತನ ಪುನರುತ್ಥಾನದ ನಂತರ ಯೇಸುವನ್ನು ನೋಡಿದವರು ಆತನು ಕೇವಲ ಮನುಷ್ಯನಲ್ಲ, ದೇವರ ಅವತಾರ ಎಂದು ನಂಬಿದ್ದರು. ಶಿಷ್ಯರು ತಮ್ಮ ಜೀವವನ್ನು ಪಣಕ್ಕಿಟ್ಟರೂ ಸಹ, ಯೇಸುವಿನ ಕುರಿತು ಈ ಸಂದೇಶವನ್ನು ಇತರರಿಗೆ ಹೇಳಿದರು. ಇಂದು, 2000 ವರ್ಷಗಳಿಂದ ಬಂದಿರುವ ಇದೇ ನಂಬಿಕೆಯ ಕಾರಣದಿಂದ 2 ಶತಕೋಟಿ ಜನರು ಯೇಸುವನ್ನು ಅನುಸರಿಸುತ್ತಾರೆ. ಇತರರು ಯೇಸುವನ್ನು ನಂಬುವುದಿಲ್ಲ, ಆದರೆ ನಂಬುವವರಿಗೆ, ಆತನು ನಮ್ಮೆಲ್ಲರನ್ನು ರಕ್ಷಿಸಲು ಬಂದ ದೇವರ ಏಕೈಕ ಪುತ್ರ.

ಯೇಸುವು ತನ್ನನ್ನು ನಂಬುವ “ಎಲ್ಲರಿಗೆ ” ಶಾಶ್ವತ ಜೀವನವನ್ನು ನೀಡಲು ಬಂದನು, ಧರ್ಮವನ್ನು ಸ್ಥಾಪಿಸಲು ಅಲ್ಲ.

ಅವನು ಸತ್ಯವೇದದ ಕೇಂದ್ರಬಿಂದು ಮತ್ತು ಪರಲೋಕಕ್ಕೆ ಏಕೈಕ ಮಾರ್ಗವಾಗಿದ್ದಾನೆ. “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.”  ಅ. ಕೃತ್ಯ 4:12 (ಬೈಬಲ್).