ಇತಿಹಾಸದುದ್ದಕ್ಕೂ, ಯೇಸುಕ್ರಿಸ್ತನ ಬೋಧನೆಗಳು ಮತ್ತು ಉಲ್ಲೇಖಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಿವೆ. ಅವರ ಮಾತುಗಳು ಜೀವನವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿವೆ ಮತ್ತು ಜೀವನ ಹಾಗೂ ಶಾಶ್ವತ ಸತ್ಯಗಳ ಮೇಲೆ ನಿರಂತರವಾದ ಜ್ಞಾನವನ್ನು ಒದಗಿಸುತ್ತದೆ. ಈ ಸಂಗ್ರಹಣೆಯಲ್ಲಿ, ನಾವು ಯೇಸುವಿನ 75 ಪ್ರಬಲ ವಾಕ್ಯಗಳು ಮತ್ತು ಬೋಧನೆಗಳನ್ನು ಸಂಗ್ರಹಿಸಿದ್ದೇವೆ. ಇದು ಎಲ್ಲಾ ಹಿನ್ನೆಲೆ, ಭಾಷೆ, ಕುಲ ಮತ್ತು ನಂಬಿಕೆಗಳ ಜನರಿಗೆ ಜ್ಞಾನವನ್ನು ಉಂಟುಮಾಡುತ್ತದೆ. ಸಹಾನುಭೂತಿ ಮತ್ತು ಪ್ರೀತಿಯ ಮಾತುಗಳಿಂದ ನಂಬಿಕೆ ಮತ್ತು ಕ್ಷಮೆಯ ಬೋಧನೆಗಳವರೆಗೆ, ಯೇಸುವಿನ ಕಾಲಾತೀತ ಸಂದೇಶಗಳು ಅರ್ಥಪೂರ್ಣ ಮತ್ತು ಉದ್ದೇಶಪೂರ್ವಕ ಜೀವನವನ್ನು ನಡೆಸಲು ಆಳವಾದ ಒಳನೋಟ ಮತ್ತು ಮಾರ್ಗದರ್ಶನವನ್ನು ನೀಡುತ್ತವೆ. ಬನ್ನಿರಿ, ಯೇಸುವಿನ ಆಳವಾದ ಜ್ಞಾನವನ್ನು ಅನ್ವೇಷಿಸುವ ಮತ್ತು ಮಾನವೀಯತೆಯ ಮೇಲೆ ಆತನ ನಿರಂತರ ಪ್ರಭಾವವನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ನಮ್ಮೊಂದಿಗೆ ಭಾಗಿಗಳಾಗಿರಿ.
ಯೇಸುವಿನ ಏಳು “ನಾನೇ” ಹೇಳಿಕೆಗಳು (ಸತ್ಯವೇದ ವಚನಗಳು)
ಯೇಸುವಿನ ಏಳು “ನಾನೇ” ಹೇಳಿಕೆಗಳು ಆತನ ದೈವತ್ವ ಮತ್ತು ಉದ್ದೇಶದ ಪ್ರಬಲ ಘೋಷಣೆಗಳಾಗಿವೆ. ಈ ಪ್ರತಿಯೊಂದು ಹೇಳಿಕೆಗಳಲ್ಲಿ, ಯೇಸು ಕ್ರಿಸ್ತನು ತನ್ನ ಗುರುತು ಮತ್ತು ಧ್ಯೇಯದ ವಿಭಿನ್ನ ಅಂಶವನ್ನು ಬಹಿರಂಗಪಡಿಸುತ್ತಾನೆ, ತಾನೇ ಸತ್ಯ, ಜೀವ ಮತ್ತು ರಕ್ಷಣೆಯ ಒಂದೇ ಮೂಲ ಎಂದು ತನ್ನ ಅನುಯಾಯಿಗಳಿಗೆ ತೋರಿಸುತ್ತಾನೆ. ಈ ಹೇಳಿಕೆಗಳ ಮೂಲಕ, ಯೇಸು ತನ್ನನ್ನು ಜೀವವುಳ್ಳ ರೊಟ್ಟಿ, ಬೆಳಕು, ಕುರಿಗಳಿಗೆ ಬಾಗಿಲು, ಉತ್ತಮ ಕುರುಬ, ಪುನರುತ್ಥಾನ ಮತ್ತು ಜೀವನ, ಮಾರ್ಗ, ಸತ್ಯ ಮತ್ತು ಜೀವ ಮತ್ತು ನಿಜವಾದ ದ್ರಾಕ್ಷೆಬಳ್ಳಿಯಾಗಿ ಸ್ಥಾಪಿಸುತ್ತಾನೆ. ಪ್ರತಿಯೊಂದು ಹೇಳಿಕೆಯು ತೂಕ ಮತ್ತು ಮಹತ್ವವನ್ನು ಹೊಂದಿದೆ, ಮತ್ತು ಯೇಸುವಿನ ಈ ಆಳವಾದ ಘೋಷಣೆಗಳ ಹಿಂದಿನ ಅರ್ಥದ ಆಳವನ್ನು ಅರಿಯುವುದು ಮುಖ್ಯವಾಗಿದೆ.
- ಅದಕ್ಕೆ ಯೇಸು, “’ಅವರಿಗೆ – ಜೀವಕೊಡುವ ರೊಟ್ಟಿ ನಾನೇ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ. ‘ ಯೋಹಾನ 6:35.
ಈ ಹೇಳಿಕೆಯಲ್ಲಿ, ಯೇಸು ತಾನು ಆಧ್ಯಾತ್ಮಿಕ ಪೋಷಣೆ ಮತ್ತು ಶಾಶ್ವತ ಜೀವನದ ಮೂಲ ಎಂದು ಒತ್ತಿಹೇಳುತ್ತಾನೆ.
- “ಯೇಸು ತಿರಿಗಿ ಅವರ ಸಂಗಡ ಮಾತಾಡಲಾರಂಭಿಸಿ – ನಾನೇ ಲೋಕಕ್ಕೆ ಬೆಳಕು; ನನ್ನನ್ನು ಅನುಸರಿಸುವವನು ಕತ್ತಲೆಯಲ್ಲಿ ನಡೆಯದೆ ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು ಎಂದು ಹೇಳಿದನು. ”- ಯೋಹಾನ 8:12 ಯೇಸು ತನ್ನನ್ನು ಆತ್ಮೀಕ ಪ್ರಕಾಶದ ಮೂಲವೆಂದು ಘೋಷಿಸುತ್ತಾನೆ, ಜನರನ್ನು ಕತ್ತಲೆಯಿಂದ ಮತ್ತು ಸತ್ಯದ ಬೆಳಕಿಗೆ ಮಾರ್ಗದರ್ಶನ ಮಾಡುತ್ತಾನೆ.
- “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಗಳಿಗೆ ನಾನೇ ಬಾಗಲಾಗಿದ್ದೇನೆ.” – ಯೋಹಾನ 10:7 ಯೇಸು ತನ್ನನ್ನು ರಕ್ಷಣೆಯ ಒಂದೇ ಮಾರ್ಗ ಎಂದು ಹೇಳುತ್ತಾನೆ, ಜನರು ದೇವರೊಂದಿಗೆ ಸಂಬಂಧವನ್ನು ಹೊಂದುವ ಏಕೈಕ ಮಾರ್ಗ ಯೇಸುವಾಗಿದ್ದಾನೆ.
- “ನಾನೇ ಒಳ್ಳೇ ಕುರುಬನು; “– ಯೋಹಾನ 10:11 ಯೇಸು ತನ್ನನ್ನು ಒಳ್ಳೆಯ ಕುರುಬನಿಗೆ ಹೋಲಿಸುತ್ತಾನೆ. ಹೇಗೆ ಒಳ್ಳೆಯ ಕುರುಬನು ತನ್ನ ಕುರಿಗಳಿಗಾಗಿ ತನ್ನ ಪ್ರಾಣವನ್ನೇ ಕೊಡುತ್ತಾನೋ ಹಾಗೆಯೆ ಯೇಸು ತನ್ನ ಪ್ರೀತಿಯನ್ನು ತನ್ನ ಜನರಿಗಾಗಿ ತೋರಿಸುತ್ತಾನೆ.
- “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ;” – ಯೋಹಾನ 11:25 ತನಗೆ ಮರಣದ ಮೇಲೆ ಅಧಿಕಾರವಿದೆ ಮತ್ತು ತನ್ನನ್ನು ನಂಬುವವರಿಗೆ ಶಾಶ್ವತ ಜೀವನವನ್ನು ನೀಡುತ್ತೇನೆ ಎಂದು ಯೇಸು ಘೋಷಿಸುತ್ತಾನೆ.
- “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ” – ಯೋಹಾನ 14:6 ಯೇಸುವು ದೇವರ ಬಳಿಗೆ ಸೇರಲು ತಾನೊಂದೇ ನಿಜವಾದ ಮಾರ್ಗ, ಸತ್ಯದ ಸಾಕಾರ ಮತ್ತು ಶಾಶ್ವತ ಜೀವನದ ಮೂಲ ಎಂದು ಪ್ರತಿಪಾದಿಸುತ್ತಾನೆ.
- “ನಾನೇ ನಿಜವಾದ ದ್ರಾಕ್ಷೇಬಳ್ಳಿ.” – ಯೋಹಾನ 15:1 ಯೇಸು ತನ್ನನ್ನು ದ್ರಾಕ್ಷೆಬಳ್ಳಿಗೆ ಹೋಲಿಸುತ್ತಾನೆ, ಆಧ್ಯಾತ್ಮಿಕ ಫಲವನ್ನು ಹೊಂದಲು ಮತ್ತು ದೇವರೊಂದಿಗೆ ನಿಕಟ ಸಂಬಂಧವನ್ನು ಕಾಪಾಡಿಕೊಳ್ಳಲು ಆತನಲ್ಲೇ ನೆಲೆಯಾಗಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾನೆ.
ಈ “ನಾನೇ” ಹೇಳಿಕೆಗಳು ಯೇಸುವಿನ ದೈವಿಕ ಸ್ವಭಾವ, ಅಧಿಕಾರ, ಮಾನವನ ರಕ್ಷಣೆ ಮತ್ತು ಆತ್ಮೀಕ ವೃದ್ಧಿಯಲ್ಲಿ ಆತನು ವಹಿಸುವ ಅನನ್ಯ ಪಾತ್ರವನ್ನು ಎತ್ತಿ ತೋರಿಸುತ್ತವೆ.
ಧನ್ಯತೆ – ಪರ್ವತದ ಮೇಲಿನ ಪ್ರಸಂಗದಲ್ಲಿ ಯೇಸು ಹೇಳಿದ ಪ್ರಸಿದ್ಧ ವಾಕ್ಯಗಳು
ಮತ್ತಾಯ 5:3-12ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು ಪರ್ವತದ ಮೇಲಿನ ಪ್ರಸಂಗದಲ್ಲಿ ಹೇಳಿದ ಆಶೀರ್ವಾದಗಳು ಇಲ್ಲಿವೆ. ಆತನು ದೇವರ ರಾಜ್ಯಕ್ಕೆ ಸೇರಿದವರು ಹೊಂದಿರುವ ಗುಣಲಕ್ಷಣಗಳು ಮತ್ತು ವರ್ತನೆಗಳನ್ನು ವಿವರಿಸುತ್ತಾನೆ.
- “ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕರಾಜ್ಯವು ಅವರದು..” ಈ ವಾಕ್ಯವು ನಮ್ಮ ಆಧ್ಯಾತ್ಮಿಕ ಬಡತನ ಮತ್ತು ದೇವರ ಮೇಲೆ ಅವಲಂಬನೆಯನ್ನು ಗುರುತಿಸುವ ಮೌಲ್ಯವನ್ನು ಎತ್ತಿ ತೋರಿಸುತ್ತದೆ. ಇಂಥವರು ಸ್ವರ್ಗಕ್ಕೆ ಪಾತ್ರರಾಗುವರು ಎಂಬುದನ್ನು ಈ ವಾಕ್ಯ ತಿಳಿಸುತ್ತದೆ.
- “ದುಃಖಪಡುವವರು ಧನ್ಯರು; ಅವರು ಸಮಾಧಾನ ಹೊಂದುವರು.” ದುಃಖಿಸುವವರಿಗೆ ದೇವರು ಒದಗಿಸುವ ಸಾಂತ್ವನ ಮತ್ತು ಸಮಾಧಾನವನ್ನು ಒತ್ತಿಹೇಳುತ್ತಾ ದುಃಖಿಸುವವರನ್ನು ಯೇಸು ಆಶೀರ್ವದಿಸುತ್ತಾನೆಂದು ತಿಳಿಸುತ್ತದೆ.
- “ಶಾಂತರು ಧನ್ಯರು; ಅವರು ಭೂವಿುಗೆ ಬಾಧ್ಯರಾಗುವರು.” ಶಾಂತರು , ವಿನಮ್ರರು ಮತ್ತು ಸೌಮ್ಯರು, ಇಂಥವರು ಭೂಮಿಯ ಬಾಧ್ಯತೆಯನ್ನು ಹೊಂದುತ್ತಾರೆಂದು ಈ ಆಶೀರ್ವಾದವು ನಮಗೆ ತಿಳಿಸುತ್ತದೆ.
- “ನೀತಿಗೆ ಹಸಿದು ಬಾಯಾರಿದವರು ಧನ್ಯರು; ಅವರಿಗೆ ತೃಪ್ತಿಯಾಗುವದು.” ನೀತಿಗಾಗಿ ಬಹಳವಾದ ಹಂಬಲವನ್ನು ಹೊಂದಿರುವವರನ್ನು ಯೇಸು ಆಶೀರ್ವದಿಸುತ್ತಾನೆ ಮತ್ತು ಅವರು ತೃಪ್ತರಾಗುತ್ತಾರೆ.
- “ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು.” ಇತರರಿಗೆ ಕರುಣೆಯನ್ನು ತೋರಿಸುವುದರ ಪ್ರಾಮುಖ್ಯತೆಯನ್ನು ಈ ವಚನವು ಎತ್ತಿ ತೋರಿಸುತ್ತದೆ, ಕರುಣೆ ತೋರಿಸುವವರಿಗೆ ಕರುಣೆ ದೊರೆಯುವುದು ಎಂದು ಈ ವಾಕ್ಯ ತಿಳಿಸುತ್ತದೆ.
- “ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು.” ದೇವರೊಂದಿಗೆ ನಿಕಟ ಸಂಬಂಧವನ್ನು ಅನುಭವಿಸುವ ಸುಯೋಗವನ್ನು ಒತ್ತಿಹೇಳುತ್ತಾ ಶುದ್ಧ ಹೃದಯವನ್ನು ಹೊಂದಿರುವವರನ್ನು ಯೇಸು ಆಶೀರ್ವದಿಸುತ್ತಾನೆ.
- “ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು.” ಶಾಂತಿ ಮತ್ತು ಸಮಾಧಾನವನ್ನು ಸಕ್ರಿಯವಾಗಿ ಅನುಸರಿಸುವ ಮೌಲ್ಯವನ್ನು ಈ ವಚನವು ಗುರುತಿಸುತ್ತದೆ, ಹಾಗೆ ಮಾಡುವವರನ್ನು ದೇವರ ಮಕ್ಕಳೆಂದು ಯೇಸು ಗುರುತಿಸುತ್ತಾನೆ.
- “ನೀತಿಯ ನಿವಿುತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು; ಪರಲೋಕರಾಜ್ಯವು ಅವರದು.” ಸದಾಚಾರ ಮತ್ತು ನೀತಿಯನ್ನು ಅನುಸರಿಸುವ ಕಾರಣದಿಂದ ಕಿರುಕುಳ ಮತ್ತು ವಿರೋಧವನ್ನು ಎದುರಿಸುವವರನ್ನು ಯೇಸು ಆಶೀರ್ವದಿಸುತ್ತಾನೆ, ದೇವರ ರಾಜ್ಯದಲ್ಲಿ ಅವರು ಸ್ಥಾನವನ್ನು ಹೊಂದುತ್ತಾರೆ ಎಂದು ತಿಳಿಸುತ್ತಾನೆ.
ಪಾಪ ಮತ್ತು ಪರಲೋಕದ ಕುರಿತು ಯೇಸುವಿನ ಮಾತುಗಳು
ಪ್ರತಿಯೊಂದು ಆತ್ಮವೂ ಅಮೂಲ್ಯ
- ಲೂಕ 15:4 “ಅದೇನಂದರೆ – ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದು ಹೋದರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೇ?”
- ಲೂಕನು 15:7 “ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ನಿಮಗೆ ಹೇಳುತ್ತೇನೆ.”
ಪಾಪಿಗಳು ಪಶ್ಚಾತ್ತಾಪ ಪಡಬೇಕು
- ಲೂಕ 5:32 “ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.”
- ಲೂಕ 13:3 “ದೇವರ ಕಡೆಗೆ ತಿರುಗಿಕೊಳ್ಳದಿದ್ದರೆ ನೀವೆಲ್ಲರೂ ಹಾಗೆಯೇ ಹಾಳಾಗಿ ಹೋಗುವಿರಿ.”
- ಯೋಹಾನ 8:11 “ಹೋಗು, ಇನ್ನು ಮೇಲೆ ಪಾಪಮಾಡಬೇಡ ಎಂದು ಹೇಳಿದನು”
ಯೇಸುವಿನಲ್ಲಿ ಶಾಶ್ವತ ಜೀವನ
- “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಮರಣದಿಂದ ಪಾರಾಗಿ ಜೀವಕ್ಕೆ ಸೇರಿದ್ದಾನೆ.” (ಯೋಹಾನ 5:24)
ಹೊಸದಾಗಿ ಹುಟ್ಟುವುದು
- “ಅದಕ್ಕೆ ಯೇಸು – ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು ಅಂದನು.” (ಯೋಹಾನ 3:3)
ಶ್ರೇಷ್ಠ ಆಜ್ಞೆಯ ಮೇಲೆ ಯೇಸುವಿನ ಹೇಳಿಕೆಗಳು
- “ಆತನು – ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ – ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ.” – ಮತ್ತಾಯ 22: 37-39
ಇತರರನ್ನು ಹೇಗೆ ನಡೆಸಿಕೊಳ್ಳಬೇಕೆಂಬುವ ಬಗ್ಗೆ ಯೇಸುವಿನ ಮಾತುಗಳು
- “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.” – ಲೂಕ 6:31
- 2. ”ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ.” – ಮತ್ತಾಯ 22:39
- 3. “ಆದರೆ ನಾನು ನಿಮಗೆ ಹೇಳುವದೇನಂದರೆ – ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” – ಮತ್ತಾಯ 5:44
- “ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.” – ಮತ್ತಾಯ 7: 1-2
- “ನೀವಾದರೋ ನಿಮ್ಮ ವೈರಿಗಳನ್ನು ಪ್ರೀತಿಸಿ ಅವರಿಗೆ ಉಪಕಾರಮಾಡಿರಿ. ಧೈರ್ಯವನ್ನು ಬಿಡದೆ ಸಾಲಕೊಡಿರಿ; ಹೀಗೆ ಮಾಡಿದರೆ, ನಿಮಗೆ ಬಹಳ ಫಲ ಸಿಕ್ಕುವದು, ಮತ್ತು ನೀವು ಪರಾತ್ಪರನ ಮಕ್ಕಳಾಗುವಿರಿ. ಆತನಂತೂ ಉಪಕಾರ ನೆನಸದವರಿಗೂ ಕೆಟ್ಟವರಿಗೂ ಉಪಕಾರಿಯಾಗಿದ್ದಾನೆ.” – ಲೂಕ 6:35
- “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಭ್ರಷ್ಟರೂ ಹಾಗೆ ಮಾಡುವದಿಲ್ಲವೇ.” – ಮತ್ತಾಯ 5:46
ಯೇಸು ಭೂಮಿಗೆ ಮನುಷ್ಯನಾಗಿ ಬಂದ ಉದ್ದೇಶ
- “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” – ಯೋಹಾನ 3:16
- “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.” – ಮತ್ತಾಯ 11:28
- “ಮನುಷ್ಯಕುಮಾರನು ಸಹ ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.” – ಮಾರ್ಕ 10:45
- “ಮನುಷ್ಯಕುಮಾರನು ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.” – ಲೂಕ 19:10
- “ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು.” – ಯೋಹಾನ 10:10
ಪ್ರಾರ್ಥನೆಯ ಬಗ್ಗೆ ಯೇಸುವಿನ ಬೋಧನೆಗಳು
ಯೇಸು ತನ್ನ ಸೇವೆಯ ಉದ್ದಕ್ಕೂ ವಿವಿಧ ಸಂದರ್ಭಗಳಲ್ಲಿ ಪ್ರಾರ್ಥನೆಯ ಬಗ್ಗೆ ಕಲಿಸಿದನು. ಪ್ರಾರ್ಥನೆಯ ಕುರಿತು ಯೇಸುವಿನ ಕೆಲವು ಪ್ರಮುಖ ಬೋಧನೆಗಳು ಇಲ್ಲಿವೆ:
- ಪರಲೋಕದ ಪ್ರಾರ್ಥನೆ : ತಮಗೆ ಪ್ರಾರ್ಥಿಸಲು ಕಲಿಸೆಂದು ಕೇಳಿಕೊಂಡ ತನ್ನ ಶಿಷ್ಯರ ಕೋರಿಕೆಗೆ ಪ್ರತಿಕ್ರಿಯೆಯಾಗಿ, ಯೇಸು ಸ್ವಾಮಿಯು ‘ಪರಲೋಕದ ಪ್ರಾರ್ಥನೆ’ ಎಂದು ಕರೆಯಲ್ಪಡುವ ಮಾದರಿ ಪ್ರಾರ್ಥನೆಯನ್ನು ಹೇಳಿಕೊಟ್ಟನು( ಮತ್ತಾಯ 6:9-13 ). ಈ ಪ್ರಾರ್ಥನೆಯು ದೇವರ ಪವಿತ್ರತೆಯನ್ನು ಅಂಗೀಕರಿಸುವುದು, ಆತನ ಚಿತ್ತವನ್ನು ಹುಡುಕುವುದು, ದೈನಂದಿನ ಪೂರೈಕೆಗಾಗಿ ಬೇಡಿಕೊಳ್ಳುವುದು, ಕ್ಷಮೆಯನ್ನು ಹುಡುಕುವುದು ಮತ್ತು ಶೋಧನೆಗೆ ಒಳಗಾಗದಂತೆ ಕರ್ತನ ಸಹಾಯ ಬೇಡುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
- “ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು. – ಮತ್ತಾಯ 7: 7
- ಎಡೆಬಿಡದೆ ಪ್ರಾರ್ಥನೆ : ಯೇಸುಸ್ವಾಮಿಯು ವಿಧವೆಯ ಸಾಮ್ಯದ ಮೂಲಕ ಎಡೆಬಿಡದೆ ಪ್ರಾರ್ಥಿಸುವ ಪ್ರಾಮುಖ್ಯತೆಯನ್ನು ಕಲಿಸಿದನು. ( ಲೂಕ 18:1-8 ). ಆತನು ಶಿಷ್ಯರನ್ನು ಯಾವಾಗಲೂ, ಎಡೆಬಿಡದೆ ಪ್ರಾರ್ಥಿಸುತ್ತಿರಬೇಕೆಂದು ಕಲಿಸಿಕೊಟ್ಟನು. ಬೇಸರಗೊಳ್ಳದೆ ಪ್ರಾರ್ಥಿಸುವಾಗ ದೇವರು ತಕ್ಕ ಸಮಯದಲ್ಲಿ ಪ್ರಾರ್ಥನೆಗಳಿಗೆ ಉತ್ತರಿಸುತ್ತಾರೆ ಎಂದು ಕಲಿಸಿಕೊಟ್ಟನು.
- ಏಕಾಂತದ ಪ್ರಾರ್ಥನೆ : ಪ್ರಾಮಾಣಿಕ ಮತ್ತು ಏಕಾಂತ ಪ್ರಾರ್ಥನೆಯ ಅಗತ್ಯವನ್ನು ಯೇಸು ಒತ್ತಿ ಹೇಳಿದನು. ಪರ್ವತದ ಪ್ರಸಂಗದಲ್ಲಿ, ಆತನು ತನ್ನ ಶಿಷ್ಯರಿಗೆ ಏಕಾಂತ ಪ್ರಾರ್ಥನೆಯ ಮಹತ್ವವನ್ನು ತಿಳಿಸುತ್ತಾ, ಕಪಟ ಹಾಗೂ ತೋರಿಕೆಯ ಪ್ರಾರ್ಥನೆಯನ್ನು ಬಿಟ್ಟು, ಅಂತರಂಗದಲ್ಲಿರುವ ತಂದೆ ದೇವರಿಗೆ ಏಕಾಂತದಲ್ಲಿ ಪ್ರಾರ್ಥಿಸಲು ಬೋಧಿಸುತ್ತಾನೆ. ಮತ್ತಾಯ 6: 5-6 – “ಮತ್ತು ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ಪ್ರಾರ್ಥನೆಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.”
- ಪ್ರಾರ್ಥನೆಯಲ್ಲಿ ವಿಶ್ವಾಸ : ಯೇಸುವು ಪ್ರಾರ್ಥನೆಯಲ್ಲಿ ನಂಬಿಕೆಯ ಮಹತ್ವವನ್ನು ಒತ್ತಿಹೇಳಿದನು. ಸಾಸಿವೆ ಕಾಳಿನಷ್ಟು ಚಿಕ್ಕ ನಂಬಿಕೆಯು ಪರ್ವತವನ್ನು ಚಲಿಸುವಂಥಹ ಶಕ್ತಿ ಹೊಂದಿರುತ್ತದೆ ಹಾಗೂ ನಂಬಿಕೆಯ ಮೂಲಕ ಭಕ್ತರು ತಮ್ಮ ಪ್ರಾರ್ಥನೆಗೆ ಉತ್ತರವನ್ನು ಪಡಕೊಳ್ಳುತ್ತಾರೆ. ( ಮತ್ತಾಯ 17:20 ).
- ಕ್ಷಮೆ ಮತ್ತು ಪ್ರಾರ್ಥನೆ : ಯೇಸು ಪ್ರಾರ್ಥನೆಯಲ್ಲಿ ಕ್ಷಮೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದನು. ಪ್ರಾರ್ಥಿಸುವಾಗ, ಯಾರಾದರೂ ಇನ್ನೊಬ್ಬ ವ್ಯಕ್ತಿಯ ಮೇಲೆ ಏನಾದರೂ ವಿರೋಧವಿದ್ದರೆ , ದೇವರಿಗೆ ಪ್ರಾರ್ಥಿಸುವ ಮೊದಲು ಅದನ್ನು ಕ್ಷಮಿಸಬೇಕು. ( ಮಾರ್ಕ 11:25 ).
- ಯೇಸುವಿನ ಹೆಸರಿನಲ್ಲಿ ಪ್ರಾರ್ಥನೆ : ಯೇಸು ತನ್ನ ಶಿಷ್ಯರಿಗೆ ಆತನ ಹೆಸರಿನಲ್ಲಿ ಪ್ರಾರ್ಥಿಸಲು ಕಲಿಸಿದನು, ಅವರು ಆತನ ಹೆಸರಿನಲ್ಲಿ ಏನಾದರು ಕೇಳಿಕೊಂಡರೆ ಅದನ್ನು ತನ್ನ ಚಿತ್ತದ ಪ್ರಕಾರ ನೀಡುವೆನೆಂಬ ಭರವಸೆ ನೀಡಿದನು. ( ಯೋಹಾನ 14: 13-14 ).
- ಕೃತಜ್ಞತಾಸ್ತುತಿಯೊಂದಿಗೆ ಪ್ರಾರ್ಥನೆ: ಯೇಸು ತನ್ನ ಶಿಷ್ಯರನ್ನು ಕೃತಜ್ಞತಾ ಮನೋಭಾವದಿಂದ ಪ್ರಾರ್ಥಿಸುವಂತೆ ಪ್ರೋತ್ಸಾಹಿಸಿದನು. ತನ್ನ ಬೋಧನೆಗಳು ಮತ್ತು ಕಾರ್ಯಗಳಲ್ಲಿ, ಆತನು ದೇವರಿಗೆ ಕೃತಜ್ಞತೆಯನ್ನು ಪ್ರದರ್ಶಿಸಿದನು ಮತ್ತು ಆತನು ತನ್ನ ಪ್ರಾರ್ಥನೆಗಳಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಲು ತನ್ನ ಶಿಷ್ಯರಿಗೆ ಕಲಿಸಿದನು. ( ಲೂಕ 22:19-20 )
ಯೇಸುವಿನ ಈ ಬೋಧನೆಗಳು ಪ್ರಾರ್ಥನೆಯಲ್ಲಿ ಪ್ರಾಮಾಣಿಕತೆ, ನಿರಂತರತೆ, ನಂಬಿಕೆ, ಕ್ಷಮೆ ಮತ್ತು ಕೃತಜ್ಞತೆಯ ಮಹತ್ವವನ್ನು ಒತ್ತಿಹೇಳುತ್ತವೆ. ಅವರು ವಿಶ್ವಾಸಿಗಳನ್ನು ದೀನತೆ , ನಂಬಿಕೆ ಮತ್ತು ದೇವರ ಚಿತ್ತಕ್ಕೆ ತಮ್ಮ ಹೃದಯಗಳನ್ನು ಸಮರ್ಪಿಸುವ ಹಂಬಲದೊಂದಿಗೆ ದೇವರನ್ನು ಸಮೀಪಿಸಲು ಪ್ರೋತ್ಸಾಹಿಸುತ್ತಾರೆ.
ಮದುವೆ ಮತ್ತು ವಿಚ್ಛೇದನದ ಬಗ್ಗೆ ಯೇಸುವಿನ ಬೋಧನೆಗಳು
ಯೇಸು ತನ್ನ ಸೇವೆಯ ಸಮಯದಲ್ಲಿ ಹಲವಾರು ಸಂದರ್ಭಗಳಲ್ಲಿ ಮದುವೆಯ ಬಗ್ಗೆ ಮಾತನಾಡಿದ್ದಾನೆ. ಮದುವೆಯ ಬಗ್ಗೆ ಯೇಸುವಿನ ಕೆಲವು ಪ್ರಮುಖ ಬೋಧನೆಗಳು ಇಲ್ಲಿವೆ:
ಮಾಡುವೆ ಎಂಬ ದೇವರ ವಿನ್ಯಾಸ: ಯೇಸುವು ಮದುವೆಯ ದೈವಿಕ ಮೂಲ ಮತ್ತು ವಿನ್ಯಾಸವನ್ನು ದೃಢಪಡಿಸಿದನು. ಆತನು ಆದಿಕಾಂಡದಲ್ಲಿ ಸೃಷ್ಟಿಯ ವೃತ್ತಾಂತವನ್ನು ಉಲ್ಲೇಖಿಸಿ, “ದೇವರಾದರೋ ಸೃಷ್ಟಿಯ ಮೊದಲಿನಿಂದಲೇ ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದನೆಂತಲೂ ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಂಡು ಅವರಿಬ್ಬರು ಒಂದೇ ಶರೀರವಾಗಿರುವರೆಂತಲೂ ಬರೆದದೆ. ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು ಎಂದು ಹೇಳಿದನು.”( ಮಾರ್ಕ 10:6-9 ).
ನಿಷ್ಠೆ ಮತ್ತು ವಚನ ಬದ್ಧತೆ: ಮದುವೆಯೊಳಗೆ ನಿಷ್ಠೆ ಮತ್ತು ವಚನ ಬದ್ಧತೆಯ ಮಹತ್ವವನ್ನು ಯೇಸು ಒತ್ತಿ ಹೇಳಿದನು. ಆತನು ವ್ಯಭಿಚಾರ ಮತ್ತು ಹೃದಯದ ಕೆಟ್ಟ ಅಭಿಲಾಷೆಗಳ ವಿರುದ್ಧ ಬೋಧಿಸಿದನು, “ಆದರೆ ನಾನು ನಿಮಗೆ ಹೇಳುವದೇನಂದರೆ – ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” ( ಮತ್ತಾಯ 5:28 ). ಮದುವೆಯ ಒಡಂಬಡಿಕೆಯನ್ನು ಗೌರವಿಸಲು ಮತ್ತು ಬಾಳಸಂಗಾತಿಗೆ ನಂಬಿಗಸ್ತರಾಗಿ ಇರಲು ಯೇಸು ತನ್ನ ಹಿಂಬಾಲಕರನ್ನು ಪ್ರಭೋಧಿಸಿದನು.
ಮದುವೆಯ ಶಾಶ್ವತತೆ: ಲೈಂಗಿಕ ಅನೈತಿಕತೆ ಹೊರತುಪಡಿಸಿ ವಿಚ್ಛೇದನವನ್ನು ವಿರೋಧಿಸಿ, ಮದುವೆಯ ಶಾಶ್ವತತೆಗೆ ಯೇಸು ಒತ್ತು ನೀಡಿದ್ದಾನೆ. ಮತ್ತಾಯ 19: 9 “ಮತ್ತು ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆಂದು ನಿಮಗೆ ಹೇಳುತ್ತೇನೆ ಅಂದನು.”
ಸ್ವರ್ಗದಲ್ಲಿ ಮದುವೆಯ ದೃಷ್ಠಿಕೋನ : ಪುನರುತ್ಥಾನದಲ್ಲಿ, ಜನರು ಸ್ವರ್ಗದಲ್ಲಿ ದೇವದೂತರಂತೆ ಇರುತ್ತಾರೆ ( ಮತ್ತಾಯ 22:30 ) ಪುನರುತ್ಥಾನವಾದ ಮೇಲೆ ಮದುವೆಮಾಡಿಕೊಳ್ಳುವದೂ ಇಲ್ಲ, ಮಾಡಿಕೊಡುವದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ ಎಂದು ಯೇಸು ಕಲಿಸಿದನು. ಈ ಬೋಧನೆಯು ಶಾಶ್ವತ ಸಾಮ್ರಾಜ್ಯದ ಬೆಳಕಿನಲ್ಲಿ ಭೂಲೋಕ ವಿವಾಹದ ತಾತ್ಕಾಲಿಕ ಸ್ವರೂಪವನ್ನು ಎತ್ತಿ ತೋರಿಸುತ್ತದೆ .
ಜೀವನದ ಸಮಸ್ಯೆಗಳ ಕುರಿತು ಯೇಸುಕ್ರಿಸ್ತನ ಪ್ರಬಲ ಬೋಧನೆಗಳು
ಶಾಂತಿ
ತನ್ನನ್ನು ನಂಬುವವರಿಗೆ ನಿಜವಾದ ಶಾಂತಿ ಸಿಗುತ್ತದೆ ಎಂದು ಯೇಸು ಕಲಿಸಿದನು.
- “ ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ.” – ಯೋಹಾನ 14:27 .
- “ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದನು.” – ಯೋಹಾನ 16:33 .
- “ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.” – ಯೋಹಾನ 14:1
ಆತಂಕ
ತನ್ನನ್ನು ನಂಬುವವರು ಇಹ ಲೋಕದ ಜೀವಿತದ ಬಗ್ಗೆ ಚಿಂತಿಸಬಾರದು ಮತ್ತು ಎಲ್ಲ ವಿಷಯದಲ್ಲಿ ಆತನಲ್ಲಿ ನಂಬಿಕೆಯಿಡಬೇಕೆಂದು ಯೇಸು ಕಲಿಸಿದನು.
- “ಆದದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.“ – ಮತ್ತಾಯ 6:34
- “ಈ ಕಾರಣದಿಂದ – ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂಬದಾಗಿ ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವು ಉಡುಪಿಗಿಂತ ದೇಹವು ಮೇಲಾದದ್ದಲ್ಲವೇ.“ – ಮತ್ತಾಯ 6:25
- “ಹೀಗಿರುವದರಿಂದ – ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ.” – ಮತ್ತಾಯ 6:31,32
ಜೀವನದ ಆದ್ಯತೆಗಳು
- “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” – ಮತ್ತಾಯ 6:33
- “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು.” – ಮತ್ತಾಯ 6:19
- “ಆದರೆ ಪರಲೋಕದಲ್ಲಿ ಗಂಟು ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ. ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ.” – ಮತ್ತಾಯ 6:20,21
- “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.” – ಮತ್ತಾಯ 6:24
- “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” – ಮಾರ್ಕ 8:36
- “ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿವಿುತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.” – ಮತ್ತಾಯ 16:25
ದೀನತೆ
- “ಯಾವನಾದರೂ ಮೊದಲಿನವನಾಗಬೇಕೆಂದಿದ್ದರೆ ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಆಳೂ ಆಗಿರಬೇಕು.” – ಮಾರ್ಕ 9:35
- “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.” – ಲೂಕ 14:11
ಯೇಸುವಿನ ಹಿಂಬಾಲಕರು ಈ ಲೋಕದಲ್ಲಿ ಜೀವಿಸಬೇಕಾದ ರೀತಿ
- “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ.” – ಯೋಹಾನ 14:15
- “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ.” – ಲೂಕ 9:23
- “ಮತ್ತು ಯಾವನಾದರೂ ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನ ಹಿಂದೆ ಬಂದ ಹೊರತು ನನಗೆ ಯೋಗ್ಯನಲ್ಲ.” – ಮತ್ತಾಯ 10:38
- “ನೀವು ಭೂವಿುಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ಉಪ್ಪಿನ ರುಚಿ ಬಂದೀತು? ಜನರು ಅದನ್ನು ಹೊರಗೆಹಾಕಿ ತುಳಿಯುವದಕ್ಕೆ ಅದು ಯೋಗ್ಯವೇ ಹೊರತು ಮತ್ತಾವ ಕೆಲಸಕ್ಕೂ ಬಾರದು.” – ಮತ್ತಾಯ 5:13
- “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು.” – ಮತ್ತಾಯ 5:14
- “ಅದರಂತೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” – ಮತ್ತಾಯ 5:16
- “ನೀನಾದರೆ ಧರ್ಮಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ.” – ಮತ್ತಾಯ 6:3
- “ಮಕ್ಕಳನ್ನು ಬಿಡಿರಿ; ನನ್ನ ಹತ್ತರ ಬರುವದಕ್ಕೆ ಅವುಗಳಿಗೆ ಅಡ್ಡಿಮಾಡಬೇಡಿರಿ; ಪರಲೋಕರಾಜ್ಯವು ಇಂಥವರದೇ ” – ಮತ್ತಾಯ19:14
ತನ್ನ ಹಿಂಬಾಲಕರಿಗೆ ಯೇಸುಕ್ರಿಸ್ತನ ವಾಗ್ದಾನ
- “ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು.” – ಮತ್ತಾಯ 28:20
- “ಯಾಕಂದರೆ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ ಅಂದನು.” – ಮತ್ತಾಯ 18:20
- “ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದನು. “- ಯೋಹಾನ 16:33
ಯೇಸುವಿನ ಮಾತುಗಳನ್ನು ತಿಳಿದ ನಾವು ಏನು ಮಾಡಬೇಕು?
ಯೇಸುವಿನ ಮಾತುಗಳನ್ನು ಹೇಳುವ, ಉಲ್ಲೇಖಿಸುವ ಅನೇಕರು ಇದ್ದಾರೆ ಆದರೆ, ಅವರಲ್ಲಿ ಅನೇಕರು ಆ ಮಾತುಗಳ ಪಾಲನೆ ಮಾಡದವರಾಗಿದ್ದಾರೆ. ಆದರೆ ಯೇಸು ಹೇಳಿದನು –
ಮತ್ತಾಯ 7: 21-22 – ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು.
ಮತ್ತಾಯ 7:23 – ಆಗ ನಾನು ಅವರಿಗೆ – ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.
ಯೋಹಾನ 8: 31-32 – ಆಗ ಯೇಸು ತನ್ನನ್ನು ನಂಬಿದ ಯೆಹೂದ್ಯರಿಗೆ – ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು ಎಂದು ಹೇಳಿದನು.
ಜೀವನವನ್ನೇ ಬದಲಾಯಿಸುವ ಯೇಸು ಕ್ರಿಸ್ತನ ವಾಕ್ಯಗಳು ಮತ್ತು ಬೋಧನೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ವಾಕ್ಯಗಳನ್ನು ಮಾತ್ರ ಅನ್ವೇಷಿಸಿದ್ದೇವೆ . ದೇವರ ಮಗನಾದ ಯೇಸುವಿನ ಮಾತುಗಳು ದೈವಿಕ ಸತ್ಯಗಳನ್ನು ಬಹಿರಂಗಪಡಿಸುತ್ತವೆ. ಇಲ್ಲಿ ಚರ್ಚಿಸಲಾದ ಉಲ್ಲೇಖಗಳು ಹೃದಯ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿದೆ, ಅವು ಯೇಸು ಹಂಚಿಕೊಂಡ ಕಾಲಾತೀತ ಜ್ಞಾನದ ಸಮೃದ್ಧಿಯ ಒಂದು ನೋಟ ಮಾತ್ರ. ಆತನ ಮಾತುಗಳನ್ನು ಓದುವುದು ಅಥವಾ ಕೇಳುವುದು ಮಾತ್ರವಲ್ಲದೆ ನಿಜವಾಗಿ ಜೀವಿಸುವ ಮತ್ತು ಅವುಗಳನ್ನು ಪಾಲಿಸುವ ಮನುಷ್ಯನು, ಯೇಸು ಭರವಸೆಯಿತ್ತ ಪ್ರಕಾರ, ತನ್ನ ಜೀವನದ ನವೀಕರಣ ಹಾಗೂ ಆಧ್ಯಾತ್ಮಿಕ ಜೀವನದ ಪೂರ್ಣತೆಯನ್ನು ಅನುಭವಿಸುತ್ತಾನೆ.