ಒಂದು ಚಿಕ್ಕ ಹುಡುಗಿಯಿಂದ ಕಲಿತ ಪಾಠ
ನಾನು ಏರ್‌ಬಸ್ 335B ಅನ್ನು ಹತ್ತಿದಾಗ ನನ್ನ ಹೃದಯ ಭಾರವಾಗಿತ್ತು, ಅನಾರೋಗ್ಯದಿಂದ ಕಷ್ಟಪಡುತ್ತಿದ್ದ ತಾಯಿಯ ಚಿಂತೆಯಿಂದ ತುಂಬಿತ್ತು. ಹೊರಗೆ ಹವಾಮಾನ ಹದಗೆಡುತ್ತಿತ್ತು. ಪುಟ್ಟ ಹುಡುಗಿಯೊಬ್ಬಳು ತನ್ನ ಟೆಡ್ಡಿ ಬೇರ್ ಅನ್ನು ಬಿಗಿಯಾಗಿ ಹಿಡಿದಿರುವುದನ್ನು ನಾನು ಗಮನಿಸಿದೆ ಮತ್ತು ಆಕೆಯನ್ನು ನೋಡಿ ನಾನು ಬಾಲ್ಯದ ನಿರಾತಂಕದ ದಿನಗಳಿಗೆ ಹಿಂತಿರುಗಬೇಕೆಂದು ನನ್ನ ಹೃದಯವು ಬಯಸಿತು. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ, ಪ್ರಕ್ಷುಬ್ಧತೆ ಕ್ಯಾಬಿನ್ ಅನ್ನು ಅಲ್ಲಾಡಿಸಿತು ಮತ್ತು ಜನರು ಭಯಭೀತರಾದರು. ಆದರೆ ಚಿಕ್ಕ ಹುಡುಗಿ ಶಾಂತವಾಗಿದ್ದಳು, ಮತ್ತು ಅವಳ ಧೈರ್ಯವನ್ನು ಮೆಚ್ಚಲೇ ಬೇಕು, ಅವಳ ವಯಸ್ಸಿಗೆ ನಾನು ಅಷ್ಟು ಧೈರ್ಯಶಾಲಿಯಾಗಿದ್ದೆನೇ ಎಂದು ನಾನು ಆಶ್ಚರ್ಯಪಟ್ಟೆ.
ಹವಾಮಾನ ಶಾಂತವಾದಾಗ, ನಾನು ಅವಳನ್ನು ಕೇಳಿದೆ, “ನೀನು ಒಂಟಿಯಾಗಿ ಪ್ರಯಾಣಿಸುತ್ತಿದ್ದೀಯಾ? ನಿನಗೆ ಭಯವಾಗಲಿಲ್ಲವೇ?” ಅವಳ ಪ್ರತಿಕ್ರಿಯೆಯು ನನಗೆ ಆಶ್ಚರ್ಯವನ್ನುಂಟು ಮಾಡಿತು: “ಅಂಕಲ್, ನನ್ನ ತಂದೆ ಈ ವಿಮಾನದ ಪೈಲಟ್. ಭಯಪಡಬೇಕಾಗಿಲ್ಲ! ” ಅವಳ ತಂದೆಯಲ್ಲಿ ಅವಳ ಬಲವಾದ ನಂಬಿಕೆ ನನ್ನ ಆತ್ಮೀಕ ನಂಬಿಕೆಯ ಬಗ್ಗೆ ಯೋಚಿಸುವಂತೆ ಮಾಡಿತು. ಚಂಡಮಾರುತವನ್ನು ಎದುರಿಸಲು ಅವಳು ತನ್ನ ತಂದೆಯನ್ನು ನಂಬಿದಂತೆಯೇ, ನಾವು ಸಹ, ಜೀವನದ ಸವಾಲುಗಳ ಮೂಲಕ ನಮಗೆ ಮಾರ್ಗದರ್ಶನ ನೀಡಲು ದೇವರನ್ನು ನಂಬಬಹುದು.
ಅಬ್ರಹಾಮನ ಕಥೆಯೂ ಸಹ ನಮ್ಮ ನೆನಪಿಗೆ ಬರುವಂಥದ್ದಾಗಿದೆ, ಈತನನ್ನು ಸಾಮಾನ್ಯವಾಗಿ “ನಂಬಿಕೆಯ ತಂದೆ” ಎಂದು ಕರೆಯಲಾಗುತ್ತದೆ.
ಅಬ್ರಹಾಮ: ನಂಬಿಕೆಯ ತಂದೆ
ಸತ್ಯವೇದದಲ್ಲಿ ನಂಬಿಕೆಗೆ ಒಂದು ದೊಡ್ಡ ಉದಾಹರಣೆ ಅಬ್ರಹಾಮ. ಅವನನ್ನು ಸಾಮಾನ್ಯವಾಗಿ “ನಂಬಿಕೆಯ ತಂದೆ” ಎಂದು ಕರೆಯುತ್ತಾರೆ ಏಕೆಂದರೆ ಅವನು ಅಸಾಧ್ಯವೆಂದು ತೋರುವ ವಿಷಯದಲ್ಲಿಯೂ ಸಹ ದೇವರನ್ನು ಸಂಪೂರ್ಣ ನಂಬಿದ್ದನು. ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದನು, ಅವನು ಮತ್ತು ಅವನ ಹೆಂಡತಿ ಸಾರಾ ವಯಸ್ಸಾದವರಾಗಿದ್ದರೂ ಮತ್ತು ಮಕ್ಕಳಿಲ್ಲದಿದ್ದರೂ ಅವನು ಅನೇಕ ರಾಷ್ಟ್ರಗಳ ತಂದೆಯಾಗುತ್ತಾನೆ ಎಂದು. ಅದು ಅಸಾಧ್ಯವೆಂದು ತೋರುತ್ತಿದ್ದರೂ, ಅಬ್ರಹಾಮನು ದೇವರ ವಾಗ್ದಾನದಲ್ಲಿ ನಂಬಿಕೆಯಿಟ್ಟನು. ನಂಬಿಕೆ ಎಂದರೆ ಪರಿಸ್ಥಿತಿ ಹತಾಶವಾಗಿ ಕಂಡರೂ ಸಹ, ದೇವರಲ್ಲಿ ಸಂಪೂರ್ಣ ನಂಬಿಕೆ ಇಡುವುದು.
ನಂತರ, ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು, ಅವನ ಮಗನಾದ ಇಸಾಕನನ್ನು ತನಗೋಸ್ಕರ ಯಜ್ಞಮಾಡಲು ಕೇಳಿದನು. ದೇವರ ಈ ಆಜ್ಞೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವೆಂದು ತೋರುತ್ತಿದ್ದರೂ, ದೇವರು ಒಂದು ಯೋಜನೆಯನ್ನು ಹೊಂದಿದ್ದಾನೆಂದು ನಂಬುತ್ತಾ, ಅಬ್ರಹಾಮನು ವಿಧೇಯನಾದನು. ಕೊನೆಯಲ್ಲಿ, ದೇವರು ಇಸಾಕನ ಬದಲಿಗೆ ಟಗರನ್ನು ಯಜ್ಞಕ್ಕಾಗಿ ಒದಗಿಸಿದನು ಮತ್ತು ಅಬ್ರಹಾಮನನ್ನು ಅನೇಕ ರಾಷ್ಟ್ರಗಳ ತಂದೆಯನ್ನಾಗಿ ಮಾಡುವ ವಾಗ್ದಾನವನ್ನು ಪೂರೈಸಿದನು. ದೇವರ ಮೇಲಿನ ನಂಬಿಕೆಯು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಇದು ತೋರಿಸುತ್ತದೆ – ನಮ್ಮ ಜ್ಞಾನಕ್ಕೆ ತಿಳಿಯದ ರೀತಿಯಲ್ಲಿ ಕಾರ್ಯಸಾಧಿಸಿ, ಆತನು ಯಾವಾಗಲೂ ತನ್ನ ವಾಗ್ದಾನಗಳನ್ನು ನೆರವೇರಿಸುತ್ತಾನೆ.
ಯೇಸು : ನಮ್ಮ ನಂಬಿಕೆಯ ಅಡಿಪಾಯ
ದೇವರ ಮೇಲಿನ ನಂಬಿಕೆ ಎಲ್ಲಿಂದ ಪ್ರಾರಂಭವಾಗುತ್ತದೆ? ಇದು ಯೇಸು ಕ್ರಿಸ್ತನು ಮತ್ತು ನಮ್ಮ ಪಾಪಗಳಿಗಾಗಿ ಆತನು ಶಿಲುಬೆಯ ಮೇಲೆ ಮಾಡಿದ ತ್ಯಾಗದಿಂದ ಪ್ರಾರಂಭವಾಗುತ್ತದೆ. ಆತನನ್ನು ನಂಬುವ ಮೂಲಕ, ನಾವು ದೇವರೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಬಹುದು ಮತ್ತು ನಮ್ಮ ರಕ್ಷಣೆಗಾಗಿ ಆತನನ್ನು ನಂಬಬಹುದು. ಯೇಸು ಸತ್ತವರೊಳಗಿಂದ ಎದ್ದು ಬಂದನು, ಮತ್ತು ಅದರಿಂದಾಗಿ ನಾವು ಶಾಶ್ವತ ಜೀವನದ ಭರವಸೆಯನ್ನು ಹೊಂದಿದ್ದೇವೆ. ಆತನ ಖಾಲಿಯಾದ ಸಮಾಧಿಯು, ಮುಂದೊಂದು ದಿನ ಯೇಸುವು ನಮ್ಮನ್ನು ಕರೆದೊಯ್ಯಲು ಬರುವುದು ಹಾಗು ನಮ್ಮನ್ನು ತನ್ನ ಶಾಶ್ವತ ರಾಜ್ಯದಲ್ಲಿ ಸೇರಿಸುವುದನ್ನು ಸೂಚಿಸುತ್ತದೆ.
ಕ್ರಿಸ್ತನಲ್ಲಿ ನಂಬಿಕೆಯು ಕೇವಲ ರಕ್ಷಣೆಯ ಬಗ್ಗೆ ಅಲ್ಲ – ಇದು ಜೀವನದ ಒಂದು ಮಾರ್ಗವಾಗಿದೆ. ಕ್ರೈಸ್ತರಾಗಿ, ಕ್ರಿಸ್ತನು ಪ್ರತಿಯೊಂದು ಸವಾಲಿನ ಮೂಲಕ ನಮಗೆ ಮಾರ್ಗದರ್ಶನ ನೀಡುತ್ತಿದ್ದಾನೆ ಮತ್ತು ಆತನ ಅರಿವಿಲ್ಲದೆ ಏನೂ ನಡೆಯುವುದಿಲ್ಲ ಎಂದು ನಾವು ನಂಬುತ್ತೇವೆ ಉದಾಹರಣೆಗೆ, ಕೈ ಮತ್ತು ಕಾಲುಗಳಿಲ್ಲದೆ ಜನಿಸಿದ ಪ್ರೇರಕ ಭಾಷಣಕಾರ ನಿಕ್ ವುಜಿಸಿಕ್ ಅವರ ಕಥೆಯನ್ನು ಪರಿಗಣಿಸಿ. ತನ್ನ ದೈಹಿಕ ಸವಾಲುಗಳ ಹೊರತಾಗಿಯೂ, ನಿಕ್ ತನ್ನ ಜೀವನಕ್ಕಾಗಿ ದೇವರ ಯೋಜನೆಯನ್ನು ನಂಬುವ ಮೂಲಕ ಲಕ್ಷಾಂತರ ಜನರನ್ನುಉತ್ತೇಜಿಸಿದ್ದಾನೆ. ಅವನ ನಂಬಿಕೆಯು ಅಡೆತಡೆಗಳನ್ನು ನಿವಾರಿಸಲು ಮತ್ತು ಸಾರ್ಥಕ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟಿದೆ.
ಪ್ರತಿದಿನ ನಂಬಿಕೆಯಿಂದ ಬದುಕುವುದು
ಪ್ರತಿದಿನ ನಂಬಿಕೆಯಿಂದ ಬದುಕಲು ಶ್ರಮ ಪಡಬೇಕು. ಬೈಬಲನ್ನು ಕ್ರಮವಾಗಿ ಓದುವುದು ಮತ್ತು ದೇವರ ವಾಗ್ದಾನಗಳ ಕುರಿತು ಧ್ಯಾನಿಸುವುದು ಇದರಲ್ಲಿ ಸೇರಿದೆ. ಪ್ರಾರ್ಥನೆಯು ಸಹ ಪ್ರಾಮುಖ್ಯವಾಗಿದೆ-ಇದು ನಮಗೆ ದೇವರ ಹತ್ತಿರ ಇರಲು ಸಹಾಯ ಮಾಡುತ್ತದೆ. ನಮ್ಮ ನಂಬಿಕೆಯಲ್ಲಿ ನಮ್ಮನ್ನು ಪ್ರೋತ್ಸಾಹಿಸುವ ಇತರ ಕ್ರೈಸ್ತರ ಸುತ್ತಲೂ ಇರುವುದು ಸಹ ಸಹಾಯಕವಾಗಿದೆ. ಮತ್ತು ಮುಖ್ಯವಾಗಿ, ನಂಬಿಕೆಯೆಂದರೆ ಅನಿಶ್ಚಿತತೆ ಹಾಗೂ ಅರ್ಥವಿಲ್ಲದ ಸಂದರ್ಭದಲ್ಲೂ ಸಹ ದೇವರನ್ನು ನಂಬುವುದು ಮತ್ತು ವಿಧೇಯರಾಗಿರುವುದು ಎಂದರ್ಥ.
ನೀವು ಇನ್ನೂ ಕ್ರಿಸ್ತನನ್ನು ತಿಳಿಯದಿದ್ದರೆ , ಆತನನ್ನು ನಂಬುವ ಮೂಲಕ ನೀವು ಈ ರೀತಿಯ ನಂಬಿಕೆಯನ್ನು ಅನುಭವಿಸಬಹುದು. ಯೇಸುವು ನಿಮ್ಮ ಪಾಪಗಳಿಗಾಗಿ ಸತ್ತನು ಎಂದು ನಂಬಿರಿ ಮತ್ತು ನಿಮ್ಮನ್ನು ರಕ್ಷಿಸಲು ನಿಮ್ಮ ಜೀವಿತದಲ್ಲಿ ಆತನನ್ನು ಆಹ್ವಾನಿಸಿರಿ.
ಹೆಚ್ಚು ಓದಿ: ಯೇಸು ಕ್ರಿಸ್ತನನ್ನು ನಿಮ್ಮ ಪ್ರಭುವು ಮತ್ತು ಸ್ವಂತ ರಕ್ಷಕನನ್ನಾಗಿ ಸ್ವೀಕರಿಸುವುದು ಹೇಗೆ?
ಕ್ರಿಸ್ತನಲ್ಲಿ ನಂಬಿಕೆ ಅಥವಾ ನಂಬಿಕೆಯ ಬಗ್ಗೆ 10 ಬೈಬಲ್ ವಚನಗಳು:
- ಇಬ್ರಿಯ 11:1 (KANJV-BSI) “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.”
- ಎಫೆಸ 2: 8-9 (KANJV-BSI) “ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.”
- ರೋಮ 10:17 (KANJV-BSI) “ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ.“
- 2 ಕೊರಿಂಥ 5:7 (KANJV-BSI) “ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವಾದದರಿಂದ ದೇಹದಲ್ಲಿ ವಾಸಿಸುವವರೆಗೂ ಕರ್ತನಿಗೆ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆಂಬದನ್ನು ಬಲ್ಲೆವು.“
- ಗಲಾತ್ಯ 2:20 (NIKANJV-BSIV) “ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ಹೇಗಂದರೆ ದೇವಕುಮಾರನ ಮೇಲಣ ನಂಬಿಕೆಯಲ್ಲಿಯೇ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.”
- ಯಾಕೋಬ 2:17 (KANJV-BSI) “ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.”
- ಮಾರ್ಕ 11: 22-24 (KANJV-BSI) “ಯೇಸು ಹೇಳಿದ್ದೇನಂದರೆ – ನಿಮಗೆ ದೇವರಲ್ಲಿ ನಂಬಿಕೆಯಿರಲಿ. ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನಾದರೂ ಈ ಬೆಟ್ಟಕ್ಕೆ – ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವದು. ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ.”
- ಯೋಹಾನ 3:16 (KANJV-BSI) “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”
- 1 ಪೇತ್ರ 1: 8-9 (KANJV-BSI) “ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮರಕ್ಷಣೆಯನ್ನು ಹೊಂದುವವರಾಗಿ ಹೇಳಲಶಕ್ಯವಾದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.”
- ರೋಮ 1:17 (KANJV-BSI) “ಹೇಗಂದರೆ ದೇವರಿಂದ ದೊರಕುವ ನೀತಿಯು ಅದರಲ್ಲಿ ತೋರಿಬರುತ್ತದೆ. ನೀತಿವಂತನು ನಂಬಿಕೆಯಿಂದಲೇ ಬದುಕುವನೆಂಬ ಶಾಸ್ತ್ರೋಕ್ತಿಯ ಪ್ರಕಾರ ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುವಂಥದಾಗಿದೆ.”
ಈ ವಚನಗಳು ಕ್ರಿಸ್ತೀಯ ಜೀವನದಲ್ಲಿ ನಂಬಿಕೆಯ ಸಾರವನ್ನು ಮತ್ತು ನಂಬಿಕೆಯುಳ್ಳ ವ್ಯಕ್ತಿ ಹಾಗೂ ಕ್ರಿಸ್ತನ ನಡುವಿನ ಸಂಬಂಧದಲ್ಲಿ ಅದರ ಮಹತ್ವವನ್ನು ಎತ್ತಿ ತೋರಿಸುತ್ತವೆ.
ಮುಕ್ತಾಯ
ದೇವರಲ್ಲಿ ನಂಬಿಕೆ, ಮಗುವು ತನ್ನ ತಂದೆಯಲ್ಲಿ ಇಟ್ಟ ನಂಬಿಕೆಯಂತೆ. ಜೀವನವು ಅನಿಶ್ಚಿತ ಅಥವಾ ಕಷ್ಟಕರವೆಂದು ತೋರುತ್ತದೆಯಾದರೂ ಆತನ ಮಾರ್ಗದರ್ಶನದಲ್ಲಿ ನಂಬಿಕೆಯಿಡುವುದು ಅವಶ್ಯ. ಚಿಕ್ಕ ಹುಡುಗಿ ತನ್ನ ತಂದೆಯ ಮೇಲಿನ ನಂಬಿಕೆ, ಅಬ್ರಹಾಮನ ಅಚಲವಾದ ನಂಬಿಕೆಯನ್ನು ನೆನಪಿಸಿಕೊಳ್ಳಿ. ಯೇಸು ಕ್ರಿಸ್ತನಲ್ಲಿ ನಮ್ಮ ನಂಬಿಕೆಯ ಅಡಿಪಾಯವು ಸಹ ಅಷ್ಟೇ ಅಚಲವಾಗಿರಬೇಕು. ನಂಬಿಕೆಯ ಜೀವನವನ್ನು ನಡೆಸುವ ಮೂಲಕ ದೇವರು ಯಾವಾಗಲೂ ನಮ್ಮೊಂದಿಗಿದ್ದಾನೆ ಎಂದು ತಿಳಿದುಕೊಳ್ಳಬಹುದು ಮತ್ತು ನಾವು ಜೀವನದ ಬಿರುಗಾಳಿಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು.